

ರಮೇಶ ಜಹಗೀರದಾರ್, ದಾವಣಗೆರೆ : ರೈತ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ತಾಲೂಕಿನ ಕುಕ್ಕುವಾಡ ಗ್ರಾಮದ ಕೃಷಿಕ ಜಿ.ಎಂ. ಮಂಜುನಾಥ್ ಉತ್ತಮ ಉದಾಹರಣೆಯಾಗಿದ್ದಾರೆ. ಶ್ರದ್ಧೆ, ಆಸಕ್ತಿ ಹಾಗೂ ಪ್ರಯೋಗಶೀಲತೆ ಮೈಗೂಡಿಸಿಕೊಂಡಿರುವ ಈ ಯುವಕ ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಹದಿಮೂರು ಎಕರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆಯುವ ಜತೆಗೆ ಹೈನುಗಾರಿಕೆ, ಜೇನು ಸಾಕಣೆಯಂಥ ಉಪ ಕಸಬುಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ. ಹೊಸ ಹೊಸ ವಾಣಿಜ್ಯ ಬೆಳೆಗಳನ್ನು ಬೆಳೆದು ತೋರಿಸಿ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ತಂದೆ ಕೆ.ಜಿ. ಮಹದೇವಪ್ಪ 60 ರ ದಶಕದಲ್ಲಿ ಕೇವಲ 3 ಎಕರೆಯಲ್ಲಿ ವ್ಯವಸಾಯ ಆರಂಭಿಸಿದರು. ಮಳೆಯಾಶ್ರಿತ ಭೂಮಿಯಲ್ಲಿ ಜೋಳ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಕ್ರಮೇಣ ಅವರ ಕೃಷಿ ಭೂಮಿ ವಿಸ್ತಾರವಾಗೊಂಡು ಈಗ 13 ಎಕರೆಗೆ ಹಿಗ್ಗಿದೆ. ತಂದೆಯ ಮಾರ್ಗದರ್ಶನದಲ್ಲಿ ಪುತ್ರ ಮಂಜುನಾಥ್ ಕೃಷಿ ಕಾಯಕ ಮುಂದುವರಿಸಿದ್ದಾರೆ. ಮಂಜುನಾಥ್ ಅವರಿಗೆ ಕೃಷಿ ಇಲಾಖೆಯ ‘ಆತ್ಮ’ ಯೋಜನೆಯ ಸಮಗ್ರ ಕೃಷಿ ವಿಭಾಗದಲ್ಲಿ 2023-24ನೇ ಸಾಲಿನ ಶ್ರೇಷ್ಠ ಕೃಷಿಕ ತಾಲೂಕು ಮಟ್ಟದ ಪ್ರಶಸ್ತಿ, 2024-25 ರ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ. ... (ಬಾಕ್ಸ್) ತೋಟದೊಳಗೊಂದು ಸುತ್ತು ಬದುಗಳಲ್ಲಿ ತೇಗದ ಮರಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಾಣುವ ಅಡಕೆ ಮರಗಳು. ಅಲ್ಲಲ್ಲಿ ತೆಂಗು, ಬೇವು, ನಿಂಬೆ ಕೂಡಾ ಬೆಳೆದಿದ್ದಾರೆ. ಸಪೋಟ, ಸೇಬು, ಮರಸೇಬು, ಜಾಕ್ ಫ್ರೂಟ್, ಸ್ಟಾರ್ ಫ್ರೂಟ್, ಪೇರಲ, ಮಾವು, ಮೋಸಂಬಿ, ಕಿತ್ತಳೆ ಮುಂತಾದ ಹಣ್ಣುಗಳು, ಗೋಡಂಬಿ, ನೆಲ್ಲಿಕಾಯಿ, ಜಾಯಿಕಾಯಿ, ಚಕ್ಕೆ, ಲವಂಗದಂಥ ಮಸಾಲ ಪದಾರ್ಥಗಳ ವಾಸನೆಯೂ ಇಲ್ಲಿದೆ. ಮಂಜುನಾಥ್ ಅವರು ಎಲೆಬಳ್ಳಿಗಳು, ರಾಮಫಲ, ಕರಿಬೇವನ್ನೂ ಬೆಳೆದಿದ್ದಾರೆ. ಕಳೆದ ಮುಂಗಾರಿನಲ್ಲಿ ಹೆಸರು, ಹುರುಳಿ, ಉದ್ದು, ಹಿಂಗಾರಿನಲ್ಲಿ ಅವರೆ ಕೃಷಿಯನ್ನೂ ಮಾಡಿದ್ದರು. ತೋಟದಲ್ಲಿ ಪುಟ್ಟದೊಂದು ನರ್ಸರಿ ಇದೆ. ಅದರಲ್ಲಿ ಅಡಕೆ, ನಿಂಬೆ, ತೆಂಗು, ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ತಿಂಗಳಿಗೆ 2500 ಕ್ಕೂ ಹೆಚ್ಚು ನಿಂಬೆ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಮೂರು ಹಸುಗಳನ್ನು ಸಾಕಿರುವ ಇವರು ಪ್ರತಿ ನಿತ್ಯ 20 ಲೀಟರ್ ಹಾಲನ್ನು ಡೇರಿಗೆ ಮಾರಾಟ ಮಾಡುತ್ತಾರೆ. ಎರೆಹುಳು ತೊಟ್ಟಿಯನ್ನೂ ಮಾಡಿದ್ದಾರೆ. ಜೇನು ಕೃಷಿಯಲ್ಲೂ ತೊಡಗಿರುವ ಇವರು 5 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ತೋಟದ ಮನೆಯ ಮೇಲೆ ಬೀಳುವ ಮಳೆನೀರನ್ನು ಕೊಯ್ಲು ಮಾಡಿ, ಕೊಳವೆ ಬಾವಿಯ ಇಂಗು ಗುಂಡಿಯನ್ನು ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ. ತೋಟದಲ್ಲಿ ಒಟ್ಟು 3 ಬೋರ್‌ವೆಲ್‌ಗಳಿದ್ದು ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ಅಳವಡಿಸುವ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ... (ಬಾಕ್ಸ್) ಚಿಯಾ ಬೆಳೆಯಲ್ಲೂ ಸೈ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುವ ಚಿಯಾ (ಕಾಮಕಸ್ತೂರಿ) ಬೆಳೆಯನ್ನು ಈ ಬಾರಿ ಬೆಳೆಯುವ ಮೂಲಕ ಮಂಜುನಾಥ್ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ಬೆಳೆ ಬೆಳೆಯುವ ವಿಧಾನದ ಬಗ್ಗೆ ಯೂಟ್ಯೂಬ್‌ನಲ್ಲಿ ನೋಡಿ ಒಂದಿಷ್ಟು ಕಲಿತುಕೊಂಡ ಇವರಿಗೆ ಜಿಕೆವಿಕೆ ವಿಜ್ಞಾನಿ ಆನಂದರಾವ್, ಕತ್ತಲಗೆರೆ ಕೃಷಿ ಫಾರ್ಮ್‌ನ ಗಂಗಪ್ಪ ಬಿರಾದಾರ್ ಮತ್ತು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಲ್ಲಿಕಾರ್ಜುನ್ ಹಾಗೂ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾರ್ಗದರ್ಶನ ಮಾಡಿದ್ದಾರೆ. ಚಿಯಾ, ಬೇಸಿಗೆಯಲ್ಲಿ ಬೆಳೆಯುವ ಸೂಕ್ಷ್ಮ ಬೆಳೆಯಾಗಿದೆ. ಜಿಕೆವಿಕೆಯಿಂದ ಬೀಜಗಳನ್ನು ತರಿಸಿದ ಮಂಜುನಾಥ್ ಡಿಸೆಂಬರ್ 14 ರಂದು ಒಂದೂ ಕಾಲು ಎಕರೆಯಲ್ಲಿ ಬಿತ್ತನೆ ಮಾಡಿದರು. ಇದು ನೂರು ದಿನಗಳ ಬೆಳೆಯಾಗಿದ್ದು ಈಗಷ್ಟೇ ಕಟಾವು ಮಾಡಿದ್ದಾರೆ. 6 ರಿಂದ 7 ಕ್ವಿಂಟಾಲ್‌ನಷ್ಟು ಇಳುವರಿ ಬಂದಿದೆ.