

ದಾವಣಗೆರೆ : ತಾಲೂಕಿನ ಆನಗೋಡು ಸಮೀಪದ ಉಳಪನಕಟ್ಟೆ ಕ್ರಾಸ್‌ನ ರೈತ ಹುತಾತ್ಮರ ಸಮಾಧಿ ಬಳಿ ಸೆ.13ರಂದು ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ದನೂರು ನಾಗರಾಜಚಾರ್ ಅವರ 32ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಹೇಳಿದರು. ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಹಾಗೂ ರೈತಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಕೆ.ಎಸ್. ಬಸವಂತಪ್ಪ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ ಭಾಗವಹಿಸುವರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್, ಉಪ ವಿಭಾಗಾಧಿಕಾರಿ ಸಂತೋಷ್‌ಕುಮಾರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ರೈತಪರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಯೋಜನೆ ಹೊಂದಲಾಗಿದ್ದು, ಕಾರ್ಯಕ್ರಮದಲ್ಲಿ ಸಚಿವರ ಗಮನ ಸೆಳೆಯಲಾಗುವುದು ಎಂದು ಮಾಹಿತಿ ನೀಡಿದರು. ರೈತ ಮುಖಂಡರಾದ ಎಚ್.ಆರ್. ಲಿಂಗರಾಜ್, ಕಲ್ಲಿಂಗಪ್ಪ ಕಕ್ಕರಗೊಳ್ಳ, ಆವರಗೆರೆ ರುದ್ರಮುನಿ, ತುಂಬಿಗೆರೆ ಗಂಗಾಧರಪ್ಪ, ಆರ್.ಜಿ. ಹಳ್ಳಿ ರಾಜಶೇಖರ್, ವೀರಭದ್ರಸ್ವಾಮಿ ಮಟ್ಟಿಕಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.