

ದಾವಣಗೆರೆ : ಎಲ್ಲ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರಿಂದ ದಾವಣಗೆರೆ ಜಿಲ್ಲೆ ಅಭಿವೃದ್ಧಿಯ ಹಲವು ವಿಷಯಗಳಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು, ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು. ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ, ಲ್ಯಾಂಡ್‌ಬೀಟ್, ಪಹಣಿಗೆ ಆಧಾರ್ ಜೋಡಣೆ ಸೇರಿ ಅನೇಕ ವಿಚಾರಗಳಲ್ಲಿ ಜಿಲ್ಲೆಯು ರಾಜ್ಯದಲ್ಲಿ ಗುರುತಿಸಿಕೊಂಡಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ತಂಡದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಅನೇಕ ವರ್ಷಗಳಿಂದ ಬಗೆಹರಿಯದಿದ್ದ ಮತ್ತು ಜಟಿಲವಾದ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಯಿತು. ಇದಕ್ಕೆ ಬೇಕಾದ ಸಹಕಾರ ಜನಪ್ರತಿನಿಧಿಗಳಿಂದ ಸಿಕ್ಕಿದ್ದರಿಂದ ಅಲ್ಪ ಅವಧಿಯಲ್ಲಿ ಗುರುತರವಾದ ಕೆಲಸ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ರೈತರು, ಸಂಘ, ಸಂಸ್ಥೆಯವರ ವಿಶ್ವಾಸ ಪಡೆದು ಮಾಡಿದಾಗ ನಾವು ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೆ ಇತ್ಯರ್ಥ ಮಾಡಲಾಯಿತು ಎಂದು ತಮ್ಮ ಅವಧಿಯಲ್ಲಾದ ಕೆಲಸಗಳ ಬಗ್ಗೆ ಹೇಳಿದರು. ನೂತನ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ ಎಲ್ಲರ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿ ಮಾಡೋಣ. ಸಮಸ್ಯೆ ಬರುತ್ತವೆ, ಅವುಗಳನ್ನು ಬಗೆಹರಿಸುವುದಕ್ಕಾಗಿಯೆ ಅಧಿಕಾರಿ ವರ್ಗ ಇರುವುದು. ಮುಂಬರುವ ದಿನಗಳಲ್ಲಿ ತಂಡವಾಗಿ ಕೆಲಸ ಮಾಡೋಣ ಎಂದರು. ಹಿಂದಿನ ಅನೇಕ ಜಿಲ್ಲಾಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕೆಲಸಗಳು, ಆಡಳಿತಾತ್ಮಕ ಅನುಭವಗಳ ಸಂಗ್ರಹವನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಅವುಗಳನ್ನು ಓದುವ ಮೂಲಕ ಜನರ ಸೇವೆಯನ್ನು ಹೊಸ ಉದ್ದೇಶದಿಂದ, ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ನ್ಯಾಯಮೂರ್ತಿ ಸುಭಾಷ್ ಬಿ. ಆಡಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಪಾಲಿಕೆ ಆಯುಕ್ತೆ ರೇಣುಕಾ, ಉಪ ವಿಭಾಗಾಧಿಕಾರಿ ದುರ್ಗಶ್ರೀ ಇದ್ದರು.