

ದಾವಣಗೆರೆ : ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಜಿಲ್ಲೆಯ 17 ಜೋಡಿಗಳು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದರು. ದಾವಣಗೆರೆಯಲ್ಲಿ 15, ಹರಿಹರದಲ್ಲಿ 2 ಜೋಡಿಗಳು ಒಂದಾಗುವ ಮೂಲಕ ಹೊಸ ಜೀವನ ಆರಂಭಿಸಲು ಸಂಕಲ್ಪ ಮಾಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ರಾಜಿ ಸಂಧಾನ, ವಕೀಲರು ನಡೆಸಿದ ಪ್ರಯತ್ನದ ಫಲವಾಗಿ ಇದು ಸಾಧ್ಯವಾಗಿದೆ. ಇವುಗಳಲ್ಲಿ 2021 ರ 2 ಪ್ರಕರಣಗಳು, 2022 ಮತ್ತು 2023 ರ ತಲಾ 4 ಕೇಸ್‌ಗಳು, ಇನ್ನುಳಿದವು ಈ ವರ್ಷದ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು. ಪ್ರತಿ ವರ್ಷ 4 ಲೋಕ ಅದಾಲತ್ ಮಾಡಲಾಗುತ್ತದೆ, ಈ ವರ್ಷದಲ್ಲಿ ಇದು 2ನೆಯದಾಗಿದೆ. ಇದೊಂದು ರೀತಿಯಲ್ಲಿ ನ್ಯಾಯಾಂಗದ ಹಬ್ಬವಾಗಿದೆ. ಈ ಬಾರಿ ಬಾಕಿ ಇರುವ 5 ರಿಂದ 6 ಸಾವಿರ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿತ್ತು. 4800 ಕ್ಕೂ ಹೆಚ್ಚು ಕೇಸ್‌ಗಳನ್ನು ರಾಜಿ ಸಂಧಾನದಿಂದ ಬಗೆಹರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಕರಣ ರಾಜಿ ಮಾಡಿಕೊಂಡರೆ ನ್ಯಾಯಾಲಯದ ಶುಲ್ಕ ಉಳಿಸಬಹುದು. ತ್ವರಿತವಾಗಿ ನ್ಯಾಯ ಸಿಗುತ್ತದೆ. ಸ್ನೇಹ, ಬಾಂಧವ್ಯ ಉಳಿಯುತ್ತದೆ ಎಂದು ಹೇಳಿದರು. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ ಮಾತನಾಡಿ, ಒಂದು ಕುಟುಂಬದಲ್ಲಿ ಹೊಂದಾಣಿಕೆಯಾದರೆ 5 ಪ್ರಕರಣಗಳು ಮುಕ್ತಾಯವಾಗುತ್ತವೆ. ನ್ಯಾಯಾಲಯಕ್ಕೂ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್. ಸಲಗೆರೆ ಮಾತನಾಡಿ, ದಾಂಪತ್ಯದಲ್ಲಿ ಅನ್ಯೋನ್ಯತೆ ಇರಬೇಕು. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ ಬಗೆಹರಿಸಿಕೊಂಡು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು ಎಂದರು. ಆಪ್ತ ಸಮಾಲೋಚಕಿ ಭಾಗ್ಯಲಕ್ಷ್ಮೀ ಮಾತನಾಡಿ, ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅದನ್ನೆಲ್ಲ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ರಾಜಿ ಸಂಧಾನದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ವಕೀಲರು ಕೆಲವೊಮ್ಮೆ ತಮ್ಮ ಪ್ರಕರಣಗಳನ್ನು ತ್ಯಾಗ ಮಾಡುತ್ತಾರೆ. ಕಾನೂನು ನೆರವು, ಅರಿವು ಮತ್ತು ಲೋಕ ಅದಾಲತ್‌ನಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ ಎಂದು ಹೇಳಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರೆಣ್ಣವರ ಮಾತನಾಡಿದರು. ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಹೆಗಡೆ, 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ ಇದ್ದರು. ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿಗಳು ಪರಸ್ಪರ ಮಾಲಾರ್ಪಣೆ ಮಾಡಿಕೊಂಡರು. ಇದೇ ವೇಳೆ ಆ ಜೋಡಿಗಳಿಗೆ ಸಸಿ ನೀಡಿ, ಸಿಹಿ ಹಂಚಿ ಶುಭ ಕೋರಲಾಯಿತು.
ದಂಪತಿ ಬಾಳಿನಲ್ಲಿ ಬೆಳಕು
ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಅಣ್ಣಕ್ಕ-ಭರಮಪ್ಪ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆಪ್ತಸಮಾಲೋಚನೆ, ರಾಜಿ ಸಂಧಾನದ ನಂತರ ಈ ಜೋಡಿ ಮತ್ತೆ ಒಂದಾಗಿದೆ. ಅಂಧ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅಣ್ಣಕ್ಕ ಮತ್ತು ರೈತ ಭರಮಪ್ಪ ಅವರ ಬಾಳಿನಲ್ಲಿ ಮತ್ತೆ ಬೆಳಕು ಮೂಡಿದೆ. ಹೀಗೆ ಒಬ್ಬೊಬ್ಬರದು ಒಂದೊಂದು ಕತೆ. ದಾಂಪತ್ಯ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯ, ವ್ಯತ್ಯಾಸಗಳು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದವು. ಕೆಲವರು ಜೀವನಾಂಶ ಕೇಳಿದ್ದರು. ಮನವೊಲಿಕೆಯ ನಂತರ ಅವರು ಸಂಸಾರ ರಥವನ್ನು ಮತ್ತೆ ಮುನ್ನಡೆಸುವ ಸಂಕಲ್ಪ ತೊಟ್ಟರು.