

ದಾವಣಗೆರೆ : ಖೋಟಾ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು 6 ಜನ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿ ಅವರಿಂದ 7.70 ಲಕ್ಷ ರೂ. ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕುಕ್ಕವಾಡದ ತಳವಾರ ಕುಬೇರಪ್ಪ, ಐಗೂರು-ಲಿಂಗಾಪುರದ ಹರೀಶ, ಭದ್ರಾವತಿ ತಾಲೂಕು ದೊಡ್ಡಗೊಪ್ಪನಹಳ್ಳಿಯ ಜೆ. ರುದ್ರೇಶ, ಮೈಸೂರು ಜಿಲ್ಲೆ ಮಾಕನಹಳ್ಳಿಯ ಮನೋಜ್ ಗೌಡ, ಮಂಡ್ಯ ಜಿಲ್ಲೆ ಬೋರೆಕಲ್ಲಹಳ್ಳಿಯ ಸಂದೀಪ, ಹೊಳಲ್ಕೆರೆ ತಾಲೂಕು ಕಲ್ಕೆರೆ ಲಂಬಾಣಿ ಹಟ್ಟಿಯ ಕೃಷ್ಣನಾಯ್ಕ ಬಂಧಿತರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಖೋಟಾ ನೋಟು ಜಾಲವನ್ನು ಭೇದಿಸಿದ ವಿವರಗಳನ್ನು ನೀಡಿದರು.
ಹರಿಹರ ತಾಲೂಕು, ಹನಗವಾಡಿ ಗ್ರಾಮದ ಬಳಿ ಸರ್ವೀಸ್ ರಸ್ತೆಯಲ್ಲಿ ಜ. 17 ರಂದು ತಳವಾರ ಕುಬೇರಪ್ಪ ಮತ್ತು ಹರೀಶ ಅವರನ್ನು ವಶಕ್ಕೆ ಪಡೆದು 500 ರೂ. ಮುಖಬೆಲೆಯ 37 ಸಾವಿರ ರೂ. ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು. ಮರುದಿನ ದಾವಣಗೆರೆ ಬಾಡಾ ಕ್ರಾಸ್ ಬಳಿ ಉಳಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.
ಆರೋಪಿಗಳಿಂದ 500 ರೂ. ಮುಖಬೆಲೆಯ 9 ಸಾವಿರ ರೂ. ಮೌಲ್ಯದ ಖೋಟಾ ನೋಟುಗಳು, ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ಖೋಟಾ ನೊಟುಗಳನ್ನು ತಯಾರಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿಸಿದರು.
ನಂತರ ಮೈಸೂರಿನ ಕೂರಗಳ್ಳಿ ಮೇಗಲ ಕೊಪ್ಪಲುವಿನಲ್ಲಿನ ಬಾಡಿಗೆ ಮನೆಯಲ್ಲಿ 500 ರೂ. ಮತ್ತು 200 ರೂ. ಮುಖಬೆಲೆಯ ಒಟ್ಟು 7.07 ಲಕ್ಷ ರೂ. ಮೌಲ್ಯದ ಖೋಟಾ ನೋಟುಗಳು, 500 ರೂ. ಮುಖಬೆಲೆಯ 43 ಸಾವಿರ ರೂ. ಮೌಲ್ಯದ ಅಸಲಿ ನೋಟುಗಳು ಹಾಗೂ ಖೋಟಾ ನೋಟುಗಳನ್ನು ತಯಾರಿಸಲು ಉಪಯೋಗಿಸಿದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಪೇಪರ್ ಕಟ್ಟರ್, ಕಲರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಯಿತು ಎಂದರು.
ಇದಲ್ಲದೆ 30 ಲಕ್ಷ ರೂ. ಮೌಲ್ಯದ ಅಪೂರ್ಣ ಖೋಟಾ ನೋಟುಗಳೂ ದೊರೆತಿವೆ. ಇಬ್ಬರು ಆರೋಪಿಗಳ ಮೇಲೆ ಖೋಟಾ ನೋಟು ಸಂಬಂಧ ಈ ಹಿಂದೆ ಹರಿಹರ ಗ್ರಾಮಾಂತರ ಠಾಣೆ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಹರಿಹರ ಸಿ.ಪಿ.ಐ ಸುರೇಶ ಸಗರಿ, ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐಗಳಾದ ಬಿ.ಎಸ್. ಅರವಿಂದ್, ಅಬ್ದುಲ್ ಖಾದರ್ ಜಿಲಾನಿ, ದಾವಣಗೆರೆ ಡಿ.ಸಿ.ಆರ್.ಬಿ ವಿಭಾಗದ ಮಜೀದ್, ಆಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್ ಅವರಿದ್ದ ತಂಡವು ಕಾರ್ಯಾಚರಣೆ ನಡೆಸಿತು.
ಹರಿಹರ ವೃತ್ತ ಕಚೇರಿಯ ಮಹ್ಮದ್ ಇಲಿಯಾಜ್, ನಾಗರಾಜ, ಮುರಳೀಧರ, ಹರಿಹರ ಗ್ರಾಮಾಂತರ ಠಾಣೆಯ ಸಿಬ್ಬಂದಿ ರಮೇಶ್, ನೀಲಮೂರ್ತಿ, ಬಣಕಾರ ಶ್ರೀಧರ, ಗಂಗಾಧರ, ಸಿದ್ದಪ್ಪ, ಜಿಲ್ಲಾ ಪೊಲೀಸ್ ಕಚೇರಿಯ ಜಾಧವ್, ರಾಘವೇಂದ್ರ, ಶಾಂತಕುಮಾರ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ, ಹರಿಹರ ಸಿಪಿಐ ಸುರೇಶ ಸಗರಿ ಸುದ್ದಿಗೋಷ್ಠಿಯಲ್ಲಿದ್ದರು.