

ರಮೇಶ ಜಹಗೀರದಾರ್ ದಾವಣಗೆರೆ: ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪನೆಯಾಗಿ, 22 ವರ್ಷಗಳ ಹಿಂದೆ ಬಂದ್ ಆಗಿದ್ದ, ಶಿವಮೊಗ್ಗದ ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು 2.70 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು ಯೋಜನೆ ರೂಪಿಸಿದ್ದು, ಹೊಸ ವರ್ಷದ ವೇಳೆಗೆ ಸಿಎಂ ತವರು ಜಿಲ್ಲೆಯಲ್ಲಿ ಅಗರಬತ್ತಿ ತಯಾರಿಕೆ ಘಟಕ ಆರಂಭವಾಗುವ ನಿರೀಕ್ಷೆಯಿದೆ.
ಕಾರ್ಖಾನೆಯು ಸ್ಥಾಪನೆಯಾಗಿದ್ದು 1944ರಲ್ಲಿ. ಶ್ರೀಗಂಧದ ಎಣ್ಣೆಯನ್ನು ತಯಾರಿಸುತ್ತಿದ್ದ ಈ ಕೈಗಾರಿಕೆಯಲ್ಲಿ ಸುಮಾರು 300 ಮಂದಿ ಕೆಲಸ ಮಾಡುತ್ತಿದ್ದರು. ಕಚ್ಚಾವಸ್ತು ಶ್ರೀಗಂಧದ ಕೊರತೆಯಾಗಿದ್ದರಿಂದ 1998ರಲ್ಲಿ ಉದ್ಯಮ ಬಂದ್ ಆಯಿತು. ಈಗ ಮತ್ತೆ ಅದಕ್ಕೆ ಕಾಯಕಲ್ಪ ನೀಡಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ನಿರ್ಧರಿಸಿದೆ.
ಈ ಬಗ್ಗೆ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ನ. 1ರಿಂದ ಸಿವಿಲ್ ಕಾಮಗಾರಿಗಳ ಪ್ರಕ್ರಿಯೆಗಳನ್ನು ಆರಂಭಿಸಲು ಚಿಂತನೆ ನಡೆದಿದೆ.
ಕಾರ್ಖಾನೆಗೆ ಸೇರಿದ 13 ಎಕರೆ ಜಾಗವಿದ್ದು ಅಲ್ಲಿನ ಕಟ್ಟಡಗಳು ಶಿಥಿಲವಾಗಿವೆ, ಅವುಗಳ ನವೀಕರಣಕ್ಕೆ 1.25 ಕೋಟಿ ರೂ. ನಿಗದಿ ಮಾಡಲಾಗಿದೆ.
ಅಲ್ಲಿ ಮಿನರಲ್ ವಾಟರ್ ಬಾಟಲಿಗಳನ್ನು ತಯಾರಿಸುವ ಘಟಕವನ್ನು 1. 25 ಕೋಟಿ ವೆಚ್ಚದಲ್ಲಿ ಮಾಡುವ ಯೋಜನೆಯಿದೆ. ಅದಕ್ಕೆ ಪೂರಕವಾಗಿ ಬಾಟಲ್ ಮೇಕಿಂಗ್ ಘಟಕವೂ ಅಸ್ತಿತ್ವಕ್ಕೆ ಬರಲಿದೆ. ಮುಂಬರುವ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸುವ ಆಲೋಚನೆಯೂ ಇದೆ.
100 ಉದ್ಯೋಗ ಸೃಷ್ಟಿ: ಶ್ರೀಗಂಧದ ಅಗರಬತ್ತಿ ತಯಾರಿಕೆಯನ್ನು ಮೊದಲು ಕೈಗೆತ್ತಿಕೊಳ್ಳಲು ಸಂಸ್ಥೆಯು ಉದ್ದೇಶಿಸಿದ್ದು ಒಂದೂವರೆ ತಿಂಗಳಲ್ಲಿ ಅದರ ಉತ್ಪಾದನೆ ಆರಂಭಿಸುವ ಗುರಿ ಹೊಂದಲಾಗಿದೆ.
ಇದರಿಂದ 100 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹಿಂದೆ ಇದ್ದ ಕಾರ್ಮಿಕರಲ್ಲಿ ಕೇವಲ ಆರೇಳು ಮಂದಿ ಮಾತ್ರ ಸಿಬ್ಬಂದಿ ಇದ್ದಾರೆ. ಮುಂಬರುವ ದಿನಗಳಲ್ಲಿ 25ರಿಂದ 30 ಮಂದಿಗೆ ಕಾಯಂ ಉದ್ಯೋಗ ದೊರೆಯುವ ನಿರೀಕ್ಷೆಯಿದೆ.
ದಿನಕ್ಕೆ 1 ಲಕ್ಷ ಪಾಕೆಟ್ ಅಗರಬತ್ತಿ ಉತ್ಪಾದಿಸಲಾಗುವುದು. ಮುಂಬರುವ ದಿನಗಳಲ್ಲಿ ಜಾಸ್ಮಿನ್, ರೋಸ್ ಅಗರ್‌ಬತ್ತಿ ತಯಾರಿಸುವ ಉದ್ದೇಶವಿದೆ. ನಿಷ್ಕ್ರಿಯವಾಗಿದ್ದ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಿದಾಗ ಒಪ್ಪಿಗೆ ಕೊಟ್ಟು ಸೂಚನೆ ನೀಡಿದರು. ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರವೂ ಸಿಕ್ಕಿದೆ.
> ಮಾಡಾಳು ವಿರೂಪಾಕ್ಷಪ್ಪ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ಅಧ್ಯಕ್ಷ.