

ದಾವಣಗೆರೆ : ನಗರದ ಪಿ.ಜೆ.ಬಡಾವಣೆ ವಾಸ್ತವವಾಗಿ 48 ನೇ ಸರ್ವೆ ನಂಬರ್‌ನಲ್ಲಿದೆ. ತಾಂತ್ರಿಕ ತೊಂದರೆಯಿಂದ ಸಮಸ್ಯೆ ಉದ್ಬವಿಸಿದ್ದು, ಶೀಘ್ರ ನಿವಾರಣೆ ಆಗಲಿದೆ ಎಂದು ತಹಸೀಲ್ದಾರ್ ಎಂ.ಬಿ.ಅಶ್ವತ್ಥ ಭರವಸೆ ನೀಡಿದರು. ನಾಗರಿಕರ ಹಿತರಕ್ಷಣಾ ಸಮಿತಿಯಿಂದ ನಗರದ ಪಿ.ಜೆ.ಬಡಾವಣೆಯ ಶ್ರೀ ರಾಮ ದೇವಸ್ಥಾನ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಕ್ಫ್ ಆಸ್ತಿ ವಿವಾದ ಹಾಗೂ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ದಾಖಲೆಗಳ ಪ್ರಕಾರ ದಾವಣಗೆರೆ ಪಿ.ಜೆ.ಬಡಾವಣೆ ಸ.ನಂ.53 ರ 18 ಎಕರೆ 2 ಗುಂಟೆ ಜಮೀನು 1955-56 ರಲ್ಲಿ ದಾವಣಗೆರೆ ಗ್ರಾಮ ಬಡಾವಣೆಗೆ ಭೂ ಸ್ವಾಧೀನ ಆಗಿದ್ದು, ಗ್ರಾಮ ಬಡಾವಣೆಗೆ ಸ್ವಾಧೀನ ಆದ ತಕ್ಷಣ 53 ನೇ ಸರ್ವೆ ನಂಬರ್ ಅಸ್ತಿತ್ವ ಕಳೆದುಕೊಂಡಿದೆ. ಆಗ ಇದನ್ನು 48 ನೇ ಸರ್ವೆ ನಂಬರ್‌ಗೆ ಮರ್ಜ್ ಮಾಡಲಾಗಿದೆ ಎಂದು ತಿಳಿಸಿದರು. ಹೈಸ್ಕೂಲ್ ಮೈದಾನದ ಸ.ನಂ.48 ರಲ್ಲಿ ಅಂದು 52 ಎಕರೆ ಭೂಮಿ ಇತ್ತು. ಇದರ ಜತೆ 18 ಎಕರೆ ಭೂಮಿ ಸೇರಿ 70 ಎಕರೆ ಭೂಮಿಯಲ್ಲಿ ಹೈಸ್ಕೂಲ್ ಮೈದಾನ ಹಾಗೂ ಪಿಜೆ ಬಡಾವಣೆ ಎಲ್ಲವೂ ಬಂದಿದ್ದು, ಪಿಜೆ ಬಡಾವಣೆ ಇಂದು ವಾಸ್ತವವಾಗಿ 48 ನೇ ಸರ್ವೆ ನಂಬರ್‌ನಲ್ಲಿದೆ ಎಂದು ಸ್ಪಷ್ಟಪಡಿಸಿದರು. ಈ ಪ್ರದೇಶವು ದಿಶಾಂಕ್‌ಗೆ ಪಾಪ್ಯುಲೇಟ್ ಆಗದ ಕಾರಣ 53ನೇ ಸರ್ವೆ ನಂಬರ್ ತೋರಿಸುತ್ತಿದೆ . ಮೂಲ ಸರ್ವೆ ದಾಖಲೆ ಹಾಗೂ ಕಂದಾಯ ದಾಖಲೆಗಳ ಪ್ರಕಾರ ಸರ್ವೆ ನಂಬರ್ 52 ಮತ್ತು 54 ಇದೆ. ಅಸ್ತಿತ್ವ ಕಳೆದುಕೊಂಡಿದ್ದ 53 ನೇ ಸರ್ವೆ ನಂಬರ್‌ಗೆ ಅಖೈರು ಸರ್ವೆ ನಂಬರ್‌ನ 162ರ 4 ಎಕರೆ 25 ಗುಂಟೆ ಪಿಬಿ ರಸ್ತೆ ಖಬರಸ್ತಾನ ಜಮೀನನ್ನು ಕ್ರೋನೋಲಜಿ ಮಿಸ್ ಆಗಬಾರದು ಎಂದು ಸರ್ವೆ ಅಧಿಕಾರಿಗಳು 53 ಕ್ಕೆ ಸೇರಿಸಿದ್ದಾರೆ ಎಂದು ಮಾಹಿತಿ ನೀಡಿದರು. ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿ ಸರ್ವೆ ಕಮೀಷನರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು, ಪಿ.ಜೆ.ಬಡಾವಣೆ ಸರ್ವೆ ನಂಬರ್ 48 ಎಂಬುದಾಗಿ ದಿಶಾಂಕ್‌ನಲ್ಲಿ ಶೀಘ್ರ ಬರಲಿದೆ. ಗ್ರಾಮ ಬಡಾವಣೆಯಲ್ಲಿ ನಕ್ಷೆ ಬದಲಾವಣೆ ಆಗದೆ ಹಾಗೂ ದಿಶಾಂಕ್ ತೊಂದರೆಯಿಂದ ಗೊಂದಲ ಉಂಟಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು. ಸರ್ವೆ ನಂಬರ್ 48 ರಲ್ಲಿ ಪಿ.ಜೆ. ಬಡಾವಣೆ ಒಳಗೊಂಡಂತೆ ಮಹಾನಗರ ಪಾಲಿಕೆ ಆಸ್ತಿಯಾಗಿದ್ದು, ಇನ್ನು ಎರಡು ಮೂರು ದಿನದಲ್ಲಿ ಆರ್‌ಟಿಸಿಯಲ್ಲಿ ಬರಲಿದೆ. ಈ ಬಗ್ಗೆ ತಾವು ಹಾಗೂ ಉಪವಿಭಾಗಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಉಳಿದಂತೆ ಗ್ರಾಮ ಬಡಾವಣೆ ನಕ್ಷೆಯಲ್ಲಿ ಬದಲಾವಣೆಯನ್ನು ಸರ್ವೆ ಆಯುಕ್ತರು ಮಾಡಬೇಕಾಗಿದ್ದು ಇದಕ್ಕೂ ಸಹ ಜಿಲ್ಲಾಧಿಕಾರಿ ಪ್ರಪೋಸಲ್ ಕಳುಹಿಸಿದ್ದಾರೆ. ಪಿ.ಜೆ.ಬಡಾವಣೆ ಪ್ರಾಪರ್ಟಿ ಮೇಲೆ ನಮ್ಮ ಯಾವುದೇ ಹಕ್ಕು ಪ್ರತಿಪಾದನೆ ಇಲ್ಲ ಎಂದು ವಕ್ಫ್ ಮಂಡಳಿ ನಮ್ಮ ನೋಟಿಸ್‌ಗೆ ಉತ್ತರ ನೀಡಿದೆ ಎಂದರು. ಪಾಲಿಕೆ ಉಪ ಮೇಯರ್ ಸೋಗಿ ಶಾಂತ್‌ಕುಮಾರ್, ಸದಸ್ಯರಾದ ಎ.ನಾಗರಾಜ್, ಸವಿತಾ ಗಣೇಶ್, ಸುಧಾ ಇಟ್ಟಿಗುಡಿ, ಬಿ.ಜೆ.ಅಜಯ್‌ಕುಮಾರ್, ಪಾಲಿಕೆ ಉಪ ಆಯುಕ್ತೆ ಲಕ್ಷ್ಮಿ, ಇತರರು ಇದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಇದ್ದರು. ವಾರ್ಡ್ ಅಧ್ಯಕ್ಷ ಮಧು ಪವಾರ್ ಅಧ್ಯಕ್ಷತೆ ವಹಿಸಿದ್ದರು.