

ದಾವಣಗೆರೆ : ಉಪಯೋಗಿಸಿ ಬಿಸಾಡಿದ ವಸ್ತುಗಳೇ ಅಲ್ಲಿ ಕಚ್ಚಾ ವಸ್ತುಗಳಾಗಿದ್ದವು. ಮಕ್ಕಳು ತಮ್ಮ ಸೃಜನಶೀಲತೆಯಿಂದ ಕಸದಿಂದ ರಸ ತಯಾರಿಸಿದ್ದರು. ಸಮಾಜಕ್ಕೆ ಉಪಯುಕ್ತವಾಗುವ ಅನೇಕ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿದ್ಯಾರ್ಥಿ ದೆಸೆಯಲ್ಲೇ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗಿತ್ತು. ಇದೆಲ್ಲ ನೋಡಲು ಸಿಕ್ಕಿದ್ದು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಆವರಣದಲ್ಲಿ. ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ, ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ 2024-25 ನೇ ಸಾಲಿನ ಜಿಲ್ಲಾ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಟಿಶ್ಯು ಪೇಪರ್‌ಗಳಿಂದ ಮಲ್ಲಿಗೆ ಹೂ ಕುಂಡ, ತೋರಣ, ಕಪ್ಪೆ ಚಿಪ್ಪುಗಳಲ್ಲಿ ಮೂಡಿದ ಪ್ರಾಣಿ, ಪಕ್ಷಿಗಳು, ತುಂಡಾದ ಬಟ್ಟೆಗಳನ್ನು ಹೊಲಿದು ಬಣ್ಣ ಬಣ್ಣದ ಉಡುಪುಗಳನ್ನು ತಯಾರಿಸಲಾಗಿತ್ತು. ಗೊಂಬೆಗಳು, ಡ್ರಾಯಿಂಗ್ ಶೀಟ್, ಪ್ಲಾಸ್ಟಿಕ್ ಚಮಚ ಬಳಸಿ ಹೂವು, ಚಿಟ್ಟೆ, ಐಸ್‌ಕ್ರೀಂ ಚಮಚಗಳಿಂದ ದೋಣಿ, ಬಂಡಿ, ದೇವರ ಬುಟ್ಟಿ, ಗೋಡೆ ಅಲಂಕಾರಿಕ ವಸ್ತುಗಳನ್ನು ಆವರಗೆರೆಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ತಯಾರಿಸಿದ್ದರು. ... ಭತ್ತದ ಆಭರಣ ವಿದ್ಯಾರ್ಥಿಗಳು ಭತ್ತದಿಂದ ಸರ, ಕಿವಿಯೋಲೆ, ಸೊಂಟ ಪಟ್ಟಿ ತಯಾರಿಸಿದ್ದರು. ಹಗ್ಗಗಳಲ್ಲಿ ಮೂಡಿದ ಮ್ಯಾಟ್, ಕೈಚೀಲಗಳು, ಅಲಂಕಾರಿಕ ನೀರಿನ ಬಾಟಲ್, ತೋರಣ, ಮೆಕ್ಕೆಜೋಳದ ಸಿಪ್ಪೆಯಿಂದ ಹೂವಿನ ಪಾಟ್‌ಗಳು, ರಬ್ಬರ್ ಬೆಂಡ್ ಗೊಂಬೆಗಳು, ಕರ್ಚೀಫ್‌ಗಳು, ಕಲರ್‌ಫುಲ್ ಗೊಂಬೆಗಳು, ಸ್ಪಂಜ್ ಗೊಂಬೆ, ಥರ್ಮೋಕೋಲ್‌ನಲ್ಲಿ ಚಂದ್ರಯಾನ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ ಎಂದು ಸಾಸ್ವೇಹಳ್ಳಿಯ ಸರ್ಕಾರಿ ಉರ್ದು ಪ್ರೌಢಶಾಲಾ ಶಿಕ್ಷಕಿ ಶಬಿನಾ ಬೇಗಂ ಹೇಳಿದರು. ಕಸೂತಿ ಕಲೆ, ಉಡುಪುಗಳು, ಕೃಷಿ ಸಲಕರಣೆಗಳು, ತೋಟಗಾರಿಕಾ ಪದ್ಧತಿಗಳು, ಸಾಮಾಜಿಕ ಉಪಯೋಗಿತಾ ಉತ್ಪಾದನಾ ಕಾರ್ಯ ಚಟುವಟಿಕೆಗಳು ನೋಡುಗರನ್ನು ಸೆಳೆದವು. ನಾಗನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳೇ ತಯಾರಿಸಿದ ಹರ್ಬಲ್ ಹಲ್ಲಿನ ಪುಡಿ, ವ್ಯಾಸಲಿನ್, ಪಪ್ಪಾಯಿ ತೊಗಟೆಯಲ್ಲಿ ತಯಾರಾದ ಮೇಣದ ಬತ್ತಿಗಳು, ಸ್ನಾನದ ಚೂರ್ಣ, ಚರ್ಮದ ಮುಲಾಮು, ಬಾದಾಮಿ ಮಾಲ್ಟ್, ಲವಂಗ ತೈಲ, ಮೆಂಥಾಲ್, ವೈಟ್ ಪೆಟ್ರೋಲಿಯಂ, ಸ್ಯಾನಿಟೈಸರ್‌ಗಳು ಆಕರ್ಷಿಸಿದವು. ಇವುಗಳನ್ನು ಯಾವುದೇ ಅಡ್ಡಪರಿಣಾಮ ಇಲ್ಲದೇ ನಿತ್ಯವೂ ಬಳಸಬಹುದು ಎಂದು ವಿದ್ಯಾರ್ಥಿನಿಯರಾದ ಎನ್.ಲಕ್ಷ್ಮೀ, ಭಾವನಾ ಹೇಳಿದರು. ಇವುಗಳನ್ನು ಸಿದ್ಧಪಡಿಸಲು ಸತತ ಒಂದು ವಾರದಿಂದ ಪರಿಶ್ರಮಪಟ್ಟಿದ್ದಾಗಿ ತಿಳಿಸಿದರು. ಕಾರಿಗನೂರು, ಕತ್ತಲಗೆರೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಗ್ರಾಮೀಣ ಜೀವನ ಸೊಗಡು ಮತ್ತು ನಗರ ಜೀವನದಲ್ಲಿ ನಡೆಯುವ ಚಟುವಟಿಕೆಗಳ ಮಾದರಿಗಳನ್ನು ಪ್ರದರ್ಶಿಸಿದರು. ಹಸಿರುಮನೆಯ ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ತೋಟಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಸ್ಮಾರ್ಟ್ ಕೃಷಿ, ಸಾವಯವ ಕೃಷಿ ಮಾಡುವ ಸಾಧನಗಳು ಅಲ್ಲಿದ್ದವು.