

ಹರಿಹರ : ಪಂಚ ಮಹಾಭೂತಗಳಾದ ಭೂಮಿ, ನೀರು, ಗಾಳಿ, ಬೆಂಕಿ ಹಾಗೂ ಆಕಾಶ ಇವುಗಳ ಸ್ಥೂಲ ಪರಿಚಯ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕನ್ನಡ, ಹಿಂದಿ ಇಂಗ್ಲಿಷ್ ಭಾಷೆ, ಜನಪದ ಕಲಾಸಿರಿ, ಮಹಾಪುರುಷರ ಜೀವನ ಚರಿತ್ರೆ ಹೀಗೆ ಹತ್ತಾರು ವಿಷಯಗಳ ಕುರತಾದ ಮಾದರಿಗಳು ವೀಕ್ಷಕರನ್ನು ಬೇರೆಯದೆ ಲೋಕಕ್ಕೆ ಕರೆದೊಯ್ದವು. ನಗರದ ಎಂಕೆಇಟಿ ಸಿಬಿಎಸ್‌ಸಿ ಶಾಲೆಯಲ್ಲಿ ಈಚೆಗೆ ನಡೆದ ಎರಡು ದಿನಗಳ ವಾರ್ಷಿಕ ವಸ್ತು ಪ್ರದರ್ಶನ ಪ್ರತಿಭಾ ದರ್ಶನ ಪೋಷಕರು ಹಾಗೂ ಸಾರ್ವಜನಿಕರ ಹೃನ್ಮನ ಸೆಳೆಯಿತು. ಶಾಲೆಯ 17 ಕೊಠಡಿಗಳಲ್ಲಿ ಮಾದರಿಗಳನ್ನು ಜೋಡಿಸಿಡಲಾಗಿತ್ತು. ಗ್ರಾಹಕರ ಹಕ್ಕುಗಳು, ಸಂಚಾರಿ ನಿಯಮಗಳ ಪಾಲನೆಯ ಮಹತ್ವ, ಪ್ರಾಣಿಗಳ ಪ್ರಪಂಚ, ಕಂಪ್ಯೂಟರ್‌ಗಳ ಉಗಮ, ಸೌರವ್ಯೆಹ, ಸೌರಶಕ್ತಿಯ ಬಳಕೆ ಕುರಿತ ಮಾದರಿಗಳು ಸೆಳೆದವು. ವಸ್ತು ಪ್ರದರ್ಶನ ಉದ್ಘಾಟಿಸಿದ ಧರ್ಮದರ್ಶಿ ವಿಂಗ್ ಕಮಾಂಡರ್ ಎ. ರಘುನಾಥ್ ಅವರು ಪ್ರತಿ ಕೊಠಡಿಗೂ ಭೇಟಿ ನೀಡಿ ಮಕ್ಕಳು ತಯಾರಿಸಿದ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ. ಅವರಲ್ಲಿ ಅಡಗಿರುವ ಪ್ರತಿಭೆ ಹೊರ ತರುವಲ್ಲಿ ಸಹಾಯ ಮಾಡುತ್ತವೆ ಎಂದು ಹೇಳಿದರು. ಮತ್ತೊಬ್ಬ ಧರ್ಮದರ್ಶಿ ಆರ್.ಎಸ್. ವತ್ಸನ್ ಅವರು ಮಕ್ಕಳು ನೀಡಿದ ಮಾದರಿಗಳ ವಿವರಣೆಯನ್ನು ಪ್ರಶಂಶಿಸಿದ್ದಲ್ಲದೆ ವಸ್ತು ಪ್ರದರ್ಶನ ಕಲಾತ್ಮಕತೆಯಿಂದ ಕೂಡಿದೆ. ಮಕ್ಕಳಲ್ಲಿ ಸಂಶೋಧನಾತ್ಮಕ ಮನೋಭಾವ ಬೆಳೆಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದರು. ಶಾಲೆ ಆಡಳಿತಾಧಿಕಾರಿ ಡಾ.ಬಿ.ಟಿ. ಅಚ್ಯುತ್, ಪ್ರಾಚಾರ್ಯ ಮಂಜುನಾಥ್ ಕುಲಕರ್ಣಿ, ಸುನೀಲ್ ಶೆಲ್ಲಾರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅರ್ಚನಾ ಮುಳಗುಂದ್, ಎಂಕೆಇಟಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ಟಿ.ತಿಪ್ಪಣ್ಣರಾಜು, ಉನ್ನತ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕೆ.ಎನ್. ಸುಜಾತ ಉಪಸ್ಥಿತರಿದ್ದರು.