

ದಾವಣಗೆರೆ : ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್‌ನ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆ ಭಾನುವಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ, ಮರು ಪರೀಕ್ಷೆಯ ಸಿದ್ಧತಾ ಸಭೆ ಹಾಗೂ ಪರೀಕ್ಷಾ ಕೇಂದ್ರಗಳ ಪರಿವೀಕ್ಷಕರು, ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಮತ್ತು ಯಾವುದೇ ದೂರುಗಳು ಬಾರದಂತೆ ನಡೆಸಲು ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ, ಆಸನದ ವ್ಯವಸ್ಥೆ, ಬಂದೋಬಸ್ತ್ ಸೇರಿದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಭಾನುವಾರ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಒಟ್ಟು 8395 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು. ಪತ್ರಿಕೆ-1 ಬೆಳಗ್ಗೆ 10 ರಿಂದ 12 ಗಂಟೆಯ ವರೆಗೆ, ಪತ್ರಿಕೆ-2 ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್, ಡಿಡಿಪಿಐ ಜಿ. ಕೊಟ್ರೇಶ್, ಶಿಕ್ಷಣಾಧಿಕಾರಿ ರಾಜಶೇಖರ್, ವಿವಿಧ ಕಾಲೇಜುಗಳ ಪ್ರಾಚಾರ್ಯರು ಇದ್ದರು. ... ವಸ್ತ್ರ ಸಂಹಿತೆ, ನಿಷೇಧಿತ ವಸ್ತುಗಳ ಪಟ್ಟಿ: * ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಉದ್ದ ತೋಳಿನ ಉಡುಪು ಧರಿಸುವಂತಿಲ್ಲ. ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸುವುದು * ಹೆಣ್ಣು ಮಕ್ಕಳು ಮಂಗಳಸೂತ್ರ ಹಾಗೂ ಕಾಲುಂಗುರ ಹೊರತುಪಡಿಸಿ ಬೇರೆ ಆಭರಣಗಳನ್ನು ಧರಿಸುವಂತಿಲ್ಲ. * ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ. * ಕುಡಿಯುವ ನೀರಿನ ಬಾಟಲಿಗೂ ಅನುಮತಿ ಇರುವುದಿಲ್ಲ, ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. * ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. * ಟೋಪಿ ಹಾಗೂ ಯಾವುದೇ ರೀತಿಯ ಮಾಸ್ಕನ್ನು ಧರಿಸುವಂತಿಲ್ಲ. ...