

ದಾವಣಗೆರೆ : ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅಧ್ಯಯನದಷ್ಟೆ ತಾಳ್ಮೆಯೂ ಮುಖ್ಯ ಎಂದು ಯುಪಿಎಸ್‌ಸಿ ಸಾಧಕಿ ಸೌಭಾಗ್ಯಾ ಬೀಳಗಿಮಠ ಸಲಹೆ ನೀಡಿದರು.
ನಗರದ ವಿನ್ನರ್ಸ್ ಕೆರಿಯರ್ ಅಕಾಡೆಮಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಧಕಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಮಿತಿ ನಿಗದಿಪಡಿಸಿಕೊಂಡು ನಿರಂತರವಾಗಿ ಪ್ರಯತ್ನಿಸಬೇಕು. ನಿರೀಕ್ಷಿತ ಪ್ರತಿಫಲ ಸಿಗದಿದ್ದರೆ ಬೇರೆ ಕ್ಷೇತ್ರದತ್ತ ಹೊರಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಎಷ್ಟೇ ವ್ಯಾಸಂಗ ಮಾಡಿದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ವಿಚಲಿತರಾಗದೆ ತಾಳ್ಮೆಯಿಂದ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಐಎಎಸ್ ಅಧಿಕಾರಿಯಾದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಬಹುದು. ನೀವು ಒಬ್ಬ ವಿಜ್ಞಾನಿಯಾಗುವ ಅವಕಾಶ ಇದರಿಂದ ತಪ್ಪಿ ಹೋಗಬಹುದು. ಪಾಲಕರ ಒತ್ತಾಯ, ಮತ್ತೊಬ್ಬರ ಸಲಹೆ ಆಧರಿಸಿ ಈ ಸೇವೆಗೆ ಬರಬೇಡಿ. ಸೇವಾ ಗುಣ ಹೊಂದಿದವರಿಗೆ ಮಾತ್ರ ಇದು ಸೂಕ್ತ ಆಯ್ಕೆ ಎಂದರು.
ಎಂಬಿಬಿಎಸ್, ಐಐಟಿಯಲ್ಲಿ ವ್ಯಾಸಂಗ ಮಾಡಿದವರು ಕೂಡ ಯುಪಿಎಸ್‌ಸಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ನಾಯಕತ್ವದ ಗುಣ ಇರುವವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಚಿಕ್ಕ ತ್ಯಾಗಗಳಿಗೂ ಸಿದ್ಧರಿರಬೇಕು. ಆರು ವರ್ಷಗಳಿಂದ ಕುಟುಂಬದ ಯಾವುದೇ ಮದುವೆ ಸಮಾರಂಭದಲ್ಲಿ ನಾನು ಭಾಗವಹಿಸಿರಲಿಲ್ಲ. ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮೂರು ವರ್ಷ ಯಾವುದೇ ಹಬ್ಬಗಳಿಗೆ ಮನೆಗೆ ಬಂದಿರಲಿಲ್ಲ. ಪ್ರವಾಸದ ನೆಪದಲ್ಲಿ ಕಾಲಹರಣ ಮಾಡಲಿಲ್ಲ. ವಾರದಲ್ಲಿ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಸುಮ್ಮನೆ 15 ಗಂಟೆ ಓದುವುದು ವ್ಯರ್ಥ. ಗಮನವಿಟ್ಟು ಓದಿದರೆ ಮನದಟ್ಟಾಗುತ್ತದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪಠ್ಯದಷ್ಟೇ ದಿನಪತ್ರಿಕೆ ಓದು ಮುಖ್ಯವಾಗುತ್ತದೆ. ಪಠ್ಯಕ್ಕೆ ಸೀಮಿತವಾಗಿ ಅಧ್ಯಯನ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಪ್ರಚಲಿತ ವಿದ್ಯಮಾನಗಳನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ದಿನಪತ್ರಿಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆ ಎದುರಿಸುವರಿಗೆ ಪಠ್ಯವೇ ಭಗವದ್ಗೀತೆ ಇದ್ದಂತೆ. ಅದನ್ನು ಅರ್ಥ ಮಾಡಿಕೊಳ್ಳದೆ ಅಧ್ಯಯನದಲ್ಲಿ ತೊಡಗಿದರೆ ಪ್ರಯೋಜನವಿಲ್ಲ. ಅನೇಕರು ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ಉತ್ತೀರ್ಣರಾಗುವವರೆಗೂ ಮುಖ್ಯ ಪರೀಕ್ಷೆಗೆ (ಮೇನ್ಸ್) ಸಿದ್ಧತೆ ನಡೆಸುವುದಿಲ್ಲ. ಪ್ರಿಲಿಮ್ಸ್ ಮತ್ತು ಮೇನ್ಸ್ ನಡುವೆ ಗರಿಷ್ಠ 90 ದಿನಗಳ ಅಂತರವಿರುತ್ತದೆ. ಸಮಾಜಶಾಸ್ತ್ರ, ಮಾನವಶಾಸ್ತ್ರ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡವರು ಮೂರು ತಿಂಗಳಲ್ಲಿ ಸಿದ್ಧತೆ ನಡೆಸುವುದು ಕಷ್ಟ ಎಂದು ಹೇಳಿದರು.
ಉಪನ್ಯಾಸಕಿ ಅನಿತಾ ಎಚ್.ದೊಡ್ಡಗೌಡರ್, ವಿನ್ನರ್ಸ್ ಸಮೂಹ ಸಂಸ್ಥೆ ಅಧ್ಯಕ್ಷ ಶಿವರಾಜ್ ಕಬ್ಬೂರು ಇದ್ದರು.