ಕೆ-ಸೆಟ್ ಪರೀಕ್ಷೆ ವಾಣಿಜ್ಯ ಶಾಸ್ತ್ರದಲ್ಲಿ ಕಳೆದು ಹೋದ ಕನ್ನಡ

DVG-K-SET-2.jpg
Published on

ದಾವಣಗೆರೆ :  ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭಾನುವಾರ ನಡೆದ ಕೆ-ಸೆಟ್ ಪರೀಕ್ಷೆಯ ವಾಣಿಜ್ಯಶಾಸ್ತ್ರ ಪತ್ರಿಕೆಯಲ್ಲಿ ಪ್ರಶ್ನೆಗಳು ಕನ್ನಡದಲ್ಲಿ ಇಲ್ಲದಿರುವುದು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆತಂಕ ತಂದೊಡ್ಡಿದೆ.  ಪ್ರತಿ ವರ್ಷ ಕೆ-ಸೆಟ್ ಪರೀಕ್ಷೆ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಇರುತ್ತಿದ್ದವು. ಅಭ್ಯರ್ಥಿಗಳು ತಮಗೆ ಬೇಕಾದ ಭಾಷೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ ಈ ವರ್ಷ ವಾಣಿಜ್ಯಶಾಸ್ತ್ರ ಪತ್ರಿಕೆಯಲ್ಲಿ ಕನ್ನಡ ಪ್ರಶ್ನೆಗಳು ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.  ಕೆ-ಸೆಟ್ ಪರೀಕ್ಷೆಯಲ್ಲಿ ಇತಿಹಾಸ, ಶಿಕ್ಷಣ ಶಾಸ್ತ್ರ ಸೇರಿ ಇತರೆ ವಿಷಯಗಳ ಪ್ರಶ್ನೆ ಪತ್ರಿಕೆಗಳು ಕನ್ನಡ ಹಾಗೂ ಇಂಗ್ಲಿಷ್‌ಎರಡೂ ಭಾಷೆಯಲ್ಲಿವೆ. ಆದರೆ ವಾಣಿಜ್ಯಶಾಸ್ತ್ರ ಪತ್ರಿಕೆಯಲ್ಲಿ ಮಾತ್ರ ಕನ್ನಡ ಪ್ರಶ್ನೆಗಳಿಲ್ಲ. ಕರ್ನಾಟಕದಲ್ಲಿಯೇ ಈ ರೀತಿ ಕನ್ನಡ ತೆಗೆದುಹಾಕಿದರೆ ಹೇಗೆ ಎಂಬುದು ಅಭ್ಯರ್ಥಿಗಳ ಪ್ರಶ್ನೆಯಾಗಿದೆ.  ಕಾಮರ್ಸ್‌ನ ಬಹಳಷ್ಟು ಅಭ್ಯರ್ಥಿಗಳು ಕನ್ನಡ ಪುಸ್ತಕಗಳು ಹಾಗೂ ಹಳೆಯ ಪ್ರಶ್ನೆಪತ್ರಿಕೆ ಅಧ್ಯಯನ ಮಾಡಿ ಪರೀಕ್ಷೆಗೆ ಹಾಜರಾಗಿದ್ದು, ಕನ್ನಡದಲ್ಲಿ ಪ್ರಶ್ನೆಗಳು ಇಲ್ಲದಿರುವುದು ತೀವ್ರ ನಿರಾಸೆ ತರಿಸಿದೆ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.  ನೆಟ್ ಪರೀಕ್ಷೆ ಪೂರ್ಣ ಇಂಗ್ಲಿಷ್ ಭಾಷೆಯಲ್ಲಿರುವುದರಿಂದ ಗ್ರಾಮೀಣ ಭಾಗದ ಬಹಳಷ್ಟು ಅಭ್ಯರ್ಥಿಗಳು ಕನ್ನಡದಲ್ಲಿ ಇರುವ ಕೆ-ಸೆಟ್ ಪರೀಕ್ಷೆಗಾಗಿ ಕಾಯುತ್ತಿರುತ್ತಾರೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡವನ್ನೇ ತೆಗೆದುಹಾಕಿದರೆ ಯಾವ ರೀತಿ ಎಲಿಜಿಬಲ್ ಮಾಡಿಕೊಳ್ಳುವುದು ಎಂದು ನೋವು ತೋಡಿಕೊಂಡಿದ್ದಾರೆ.  ವಾಣಿಜ್ಯಶಾಸ್ತ್ರ ಅಭ್ಯರ್ಥಿಗಳಿಗೆ ಕನ್ನಡದಲ್ಲೂ ಪ್ರಶ್ನೆ ನೀಡುವ ಮೂಲಕ ಮರು ಪರೀಕ್ಷೆ ನಡೆಸಬೇಕು ಹಾಗೂ ಮುಂದಿನ ವರ್ಷದಿಂದ ಬೇರೆ ವಿಷಯಗಳಂತೆ ಕಾಮರ್ಸ್‌ಗೂ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಪತ್ರಿಕೆ ಇರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.      

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net