

ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2024ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಗರದ 23 ಕೇಂದ್ರಗಳಲ್ಲಿ ಗುರುವಾರ ಸಿಇಟಿ ಪರೀಕ್ಷೆಗಳು ಆರಂಭವಾದವು.
ಜೀವಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 12,296 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. 11,015 ಮಕ್ಕಳು ಪರೀಕ್ಷೆ ಬರೆದರು. 1281 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಗಣಿತಶಾಸ್ತ್ರ ವಿಷಯದ ಪರೀಕ್ಷೆಗೆ 12300 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. 12043 ಮಕ್ಕಳು ಪರೀಕ್ಷೆ ಬರೆದರು. 257 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಬೆಳಗ್ಗೆ 10.30 ರಿಂದ 11.50 ರ ವರೆಗೆ 60 ಅಂಕಗಳಿಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ, ಮಧ್ಯಾಹ್ನ 2.30 ರಿಂದ 3.50 ರವರೆಗೆ 60 ಅಂಕಗಳಿಗೆ ಗಣಿತ ಪರೀಕ್ಷೆ ನಡೆಯಿತು.
ಪೆನ್ ಮತ್ತು ವಸ್ತ್ರ ಸಂಹಿತೆಯನ್ನು ಪಾಲಿಸಲಾಯಿತು. ಒಎಂಆರ್ ಶೀಟ್ನಲ್ಲಿ ಮಾರ್ಕ್ ಮಾಡುವುದರಿಂದ ಕಪ್ಪು ಮತ್ತು ನೀಲಿ ಬಾಲ್ಪೆನ್ ಮಾತ್ರ ಉಪಯೋಗಿಸಬೇಕು. ಬ್ಲೇಡ್, ವೈಟ್ನರ್, ಮೊಬೈಲ್, ಬ್ಲೂಟೂತ್ ಹಾಗೂ ಯಾವುದೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಪೂರ್ಣ ತೋಳು ಇರುವ ಶರ್ಟ್ ಹಾಕದೆ ಸ್ಲ್ಯಾಗ್ ಧರಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144ನೇ ಸೆಕ್ಷನ್ ಪ್ರಕಾರ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಎಲ್ಲ ಕೇಂದ್ರಗಳಲ್ಲಿ ಕುಡಿಯುವ ನೀರು, ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಕರಿಸಿದ್ದಪ್ಪ ತಿಳಿಸಿದರು.
ವಿದ್ಯಾರ್ಥಿಗಳನ್ನು ಬಿಡಲು ಪಾಲಕರು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಮಕ್ಕಳು ಕೇಂದ್ರದ ಒಳಗೆ ಹೋಗುವ ವರೆಗೂ ಇದ್ದು ತೆರಳಿದರು. ದೂರದ ಪ್ರದೇಶಗಳಿಂದ, ಹಳ್ಳಿಗಳಿಂದ ಬಂದಿದ್ದ ಪಾಲಕರು ಎರಡೂ ಪರೀಕ್ಷೆ ಮುಗಿಯುವ ವರೆಗೂ ಕಾದು ಕುಳಿತಿದ್ದರು.
ಶುಕ್ರವಾರ ಬೆಳಗ್ಗೆ 10.30 ರಿಂದ 11.50 ರ ವರೆಗೆ 60 ಅಂಕಗಳಿಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ 60 ಅಂಕಗಳಿಗೆ ರಾಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿವೆ.