ಸಮಾನತೆ ತರಲು ಪ್ರಯತ್ನ

dvg-university.jpg
Published on

ದಾವಣಗೆರೆ : ಡಾ.ಬಿ.ಆರ್. ಅಂಬೇಡ್ಕರ್ ಅವರು ಜಾತೀಯತೆ ತೊಲಗಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯನ್ನು ಸಂವಿಧಾನದ ಮೂಲಕ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದು ಪ್ರಾಧ್ಯಾಪಕ ಡಾ. ಎಂ.ಯು. ಲೋಕೇಶ್ ಹೇಳಿದರು.  ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಬುದ್ಧ, ಬಸವಣ್ಣ ಅವರ ನಂತರ ಸಮಾನತೆ, ಸಮ ಸಮಾಜದ ತತ್ವ, ಆದರ್ಶಗಳನ್ನು ಜಾರಿಗೊಳಿಸಿ ನವ ಸಮಾಜದ ಪರಿಕಲ್ಪನೆಯನ್ನು ಪ್ರತಿಷ್ಠಾಪಿಸಲು ಡಾ.ಅಂಬೇಡ್ಕರ್ ಯತ್ನಿಸಿದರು. ಅಸ್ಪಶ್ಯತೆ, ಅಸಮಾನತೆ, ಅನಕ್ಷರತೆ, ಮೂಢ ನಂಬಿಕೆಯಂತಹ ಅಂಧಕಾರದಿಂದ ಕೂಡಿದ ಸಮಾಜವನ್ನು ಪರಿವರ್ತಿಸಿ ಅಭಿವೃದ್ಧಿಯ ಮುಖ್ಯ ವಾಹಿನಿಯಲ್ಲಿ ಕೈಜೋಡಿಸುವಂತೆ ಮಾಡುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.  ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಬದಲಾವಣೆಯ ಮಾತುಗಳಾಡಿ ದೇಶದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳು ಅದಕ್ಕೆ ಅವಕಾಶ ನೀಡದೇ ಅಂಬೇಡ್ಕರ್ ಅವರ ಆಶಯವನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.  ಕುಲಸಚಿವ ಡಾ.ಯು.ಎಸ್. ಮಹಾಬಲೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಸತ್ಯ, ನಿಷ್ಠೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು. ಅಂಬೇಡ್ಕರ್ ಅವರ ಬದುಕು, ಮೌಲ್ಯ, ಸಂದೇಶಗಳನ್ನು ಪ್ರೇರಣೆಯಾಗಿ, ಮಾರ್ಗದರ್ಶಕ ಸೂತ್ರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ಅಭಿವೃದ್ಧಿ ಘಟಕದ ಸಂಚಾಲಕ ಡಾ. ಎಂ.ಎಚ್. ನಿರಂಜನ್ ಸ್ವಾಗತಿಸಿದರು. ಡೀನ್ ಪ್ರೊ.ಆರ್. ಶಶಿಧರ್, ಐಕ್ಯೂಎಸಿ ನಿರ್ದೇಶಕ ಪ್ರೊ.ಗೋವಿಂದಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net