ಲಾಭ-ನಷ್ಟದ ಲೆಕ್ಕ ಬಿಡಿ, ಪರಿಸರ ಉಳಿಸಿ

gida.jpg
Published on

ದಾವಣಗೆರೆ : ಪರಿಸರಕ್ಕಾಗಿ ಪ್ರೀತಿಯಿಂದ ಮಾಡುವ ಯಾವುದೇ ಕೆಲಸವೂ ಆತ್ಮತೃಪ್ತಿ ನೀಡುತ್ತದೆ. ಲಾಭ-ನಷ್ಟದ ಲೆಕ್ಕ ಬಿಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಪ್ರಕೃತಿ ನೀಡುವ ಅದ್ಭುತ ಕೊಡುಗೆಗೆ ಮಿತಿ ಇರುವುದಿಲ್ಲ ಎಂದು ಪದ್ಮಶ್ರೀ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅಭಿಪ್ರಾಯಪಟ್ಟರು.
 ದಾವಣಗೆರೆ ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ನಾವು ಗಿಡ ನೆಟ್ಟು ಮರ ಬೆಳೆಸಿದರೆ, ಅವೆಲ್ಲ ನಮ್ಮನ್ನು ರಕ್ಷಿಸುತ್ತವೆ. ಪ್ರಕೃತಿಯು ತಾಯಿ ಇದ್ದಂತೆ. ತನ್ನ ಮಕ್ಕಳಿಗೆ ಎಲ್ಲವನ್ನೂ ಕೊಡುತ್ತದೆ. ಏನನ್ನೂ ವಾಪಸ್ ಬಯಸುವುದಿಲ್ಲ. ಅಂಥ ಪ್ರಕೃತಿ ಮಾತೆಯನ್ನು ಎಲ್ಲರೂ ಕಾಪಾಡಬೇಕು ಎಂದು ಸಲಹೆ ನೀಡಿದರು.
 ಗಿಡಗಳನ್ನು ನಾನು ಮಕ್ಕಳಂತೆ ಬೆಳೆಸಿದೆ. ಕಣ್ಣೆದುರೇ ಬೆಳೆದ ಗಿಡಗಳೆಲ್ಲ ನೀಡಿದ ತಂಪಿನಲ್ಲಿ ನಾನೂ ಬೆಳೆದೆ. ನಾನು ಪ್ರೀತಿಯಿಂದ ಬೆಳೆಸಿದ ಗಿಡಗಳೇ ನನ್ನನ್ನು ಈ ಮಟ್ಟಕ್ಕೆ ತಂದಿವೆ. ಪ್ರೀತಿಯಿಂದ ಯಾವುದೇ ಕೆಲಸ ಮಾಡಿದರೂ ಅದು ಸಂತೃಪ್ತಿ ನೀಡುತ್ತದೆ, ಯಶಸ್ಸನ್ನೂ ತರುತ್ತದೆ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.
 ಕಾಡು ಕಡಿದು ನಾಡು ಮಾಡುತ್ತಿದ್ದಾರೆ. ಆದರೆ ಕೆಲವರಷ್ಟೇ ಗಿಡ ನೆಡುತ್ತಿದ್ದಾರೆ. ಗಿಡಗಳು ಮಕ್ಕಳಿದ್ದಂತೆ. ನಮ್ಮ ಮಕ್ಕಳನ್ನು ಕಾಪಾಡಿದಂತೆ ಗಿಡಗಳನ್ನೂ ಪೋಷಿಸಿದರೆ ಎಲ್ಲರ ಜೀವನವೂ ಸಾರ್ಥಕತೆ ಪಡೆಯುತ್ತದೆ ಎಂದು ನುಡಿದರು.
 ಪರಿಸರ ಪ್ರೇಮಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಪುತ್ರ ಉಮೇಶ ಬಳ್ಳೂರು ಮಾತನಾಡಿ, ಪರಿಸರ ನಾಶದಿಂದ ಜಗತ್ತು ಅಪಾಯಕಾರಿ ಸ್ಥಿತಿ ತಲುಪುತ್ತಿದೆ. ಶುದ್ಧ ಗಾಳಿ, ಬೆಳಕು, ನೀರು ಇಲ್ಲದೆ ಜನರು ಹತ್ತಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಸರ ರಕ್ಷಣೆ ಮತ್ತು ಪ್ರಕೃತಿ ಸಂಬಂಧಿ ನೆಲೆಯೊಂದೇ ಪರಿಹಾರ ಮಾರ್ಗ ಎಂದು ಹೇಳಿದರು.
 ಬಡತನದಲ್ಲಿ ಹೊತ್ತು ಊಟಕ್ಕೂ ಪರದಾಡುತ್ತಿದ್ದ ಪರಿಸ್ಥಿತಿಯಲ್ಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಲುಮರದ ತಿಮ್ಮಕ್ಕ ಅವರು ರಸ್ತೆ ಇಕ್ಕೆಲಕ್ಕೆ ಸಾಲು ಸಾಲು ಮರಗಳನ್ನು ನೆಟ್ಟು ಬೆಳೆಸಿದರು. ತಮ್ಮ ಮಕ್ಕಳಂತೆ ಪೋಷಿಸಿದರು. ಅವರು ಆಗ ಮಾಡಿದ್ದು ಸೇವೆಯಾಗಿದ್ದು, ಈಗ ಅದೊಂದು ಸಾಧನೆ ಎನಿಸಿದೆ. ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚೇತನವಾಗಿದ್ದಾರೆ. ಅವರಿಂದ ಪ್ರೇರಣೆ ಪಡೆದ ಎಲ್ಲರೂ ಒಂದೊಂದು ಗಿಡ ನೆಟ್ಟರೆ ತಿಮ್ಮಕ್ಕ ಅವರ ಜೀವನ ಸಾರ್ಥಕತೆ ಪಡೆಯಲಿದೆ ಎಂದರು.
 ಕಾಡಿಗೆ ಹೋಗಿ ಪ್ರಾಣಿಗಳನ್ನು ನೋಡಲು ಆಸಕ್ತಿ ತೋರುವ ಜನರು, ಅದೇ ಪ್ರಾಣಿಗಳು ನಾಡಿಗೆ ಬಂದರೆ ಸಹಿಸುವುದಿಲ್ಲ. ಇಂಥ ವೈಪರೀತ್ಯವನ್ನು ಹೋಗಲಾಡಿಸಲು ಪರಿಸರದೊಂದಿಗೆ ಬದುಕುವ ವಾತಾವರಣವನ್ನು ನಿರ್ಮಿಸುವುದು ಸೂಕ್ತ. ಪ್ರಾಣಿಗಳು ಪ್ರಾಣಿಗಳಂತೆ ಮತ್ತು ಮನುಷ್ಯ ಮನುಷ್ಯನಂತೆ ಬದುಕುವುದು ಅತ್ಯಗತ್ಯ ಎಂದು ತಿಳಿಸಿದರು.
 ಕುಲಸಚಿವೆ ಸರೋಜ ಬಿ.ಬಿ. ಮಾತನಾಡಿ, ಪರಿಸರ ರಕ್ಷಣೆಯ ಜಾಗೃತಿ ಮೂಡಿಸಲು ಈ ಇಳಿ ವಯಸ್ಸಿನಲ್ಲಿಯೂ ದಣಿವರಿಯದಂತೆ ಕಾಳಜಿ ವಹಿಸುತ್ತಿರುವ ಮತ್ತು ಜನರಿಗೆ ಪ್ರೇರಣೆ ನೀಡುತ್ತಿರುವ ತಿಮ್ಮಕ್ಕ ಅವರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
 ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ, ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಗೋವಿಂದಪ್ಪ ಮಾತನಾಡಿದರು. ಡಾ.ಶಾರದಾದೇವಿ ಕಳ್ಳಿಮನಿ ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಅಶೋಕ ಕುಮಾರ ಪಾಳೇದ, ಪ್ರೊ.ಶಿಶುಪಾಲ, ಪ್ರೊ.ಜೆ.ಕೆ.ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net