

ದಾವಣಗೆರೆ : ವೇಗದ ಅಂತರ್ಜಾಲದಿಂದ ಹಿಡಿದು ಸರಕು ಸಾಗಣೆಯ ವರೆಗೆ, ಪೌಷ್ಟಿಕ ಆಹಾರದಿಂದ ತ್ವರಿತ ಸರಕು ಸಾಗಣೆಯ ವರೆಗೆ, ಹೈಡ್ರೋಜನ್ ಇಂಧನ ಬಳಕೆಯಿಂದ ರಕ್ಷಣಾ ಸ್ವಾವಲಂಬನೆಯ ವರೆಗೆ ಎಲ್ಲ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಆದಾಗ ಮಾತ್ರ ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಕನಸು ನನಸಾಗಲು ಸಾಧ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಿ.ಇ. ರಂಗಸ್ವಾಮಿ ಹೇಳಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ, 41ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕೃಷಿ, ಕಂಪ್ಯೂಟರ್, ಸಂಪರ್ಕ, ರಕ್ಷಣೆ, ಇ - ಆಡಳಿತ, ಇ - ವಾಣಿಜ್ಯ, ಇಂಧನ, ಶಿಕ್ಷಣ, ಸಾರಿಗೆ ಹಾಗೂ ಆರೋಗ್ಯ ಎಂಬ ಹತ್ತು ವಲಯಗಳಲ್ಲಿ ಕ್ರಾಂತಿಕಾರಕ ಪ್ರಗತಿ ಆದಾಗ ಮಾತ್ರ ಅಭಿವೃದ್ಧಿ ಹೊಂದಬಹುದು ಎಂದರು.
ಭಾರತದಲ್ಲಿ ತಲಾ ವರಮಾನ ವರ್ಷಕ್ಕೆ 2,400 ಡಾಲರ್ ಆಗಿದೆ. ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನಗಳೂ ಇದೇ ಮಟ್ಟದಲ್ಲಿವೆ. ಈ ಹಂತದಿಂದ ಮೇಲೆದ್ದು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ತಲಾ ವರಮಾನ ಈಗಿನದಕ್ಕಿಂತ ಎಂಟು ಪಟ್ಟು ಹೆಚ್ಚಾಗಬೇಕಿದೆ ಎಂದು ಹೇಳಿದರು.
ಈ ಎಲ್ಲ ಸಾಧನೆಗಳನ್ನು ಸಾಕಾರಗೊಳಿಸಲು ಇರುವ ಶಕ್ತಿ ಸೂತ್ರ ಶಿಕ್ಷಣ ಮಾತ್ರ. ಪದವಿಯೇ ಶಿಕ್ಷಣದ ಅಂತ್ಯವಲ್ಲ, ಅದು ಆರಂಭ ಮಾತ್ರ. ನಿರಂತರ ಕಲಿಕೆಯೇ ನಿಜವಾದ ಶಿಕ್ಷಣ. ಅದರಿಂದ ದೇಶದ ಬೆಳವಣಿಗೆಗೆ ಅಗತ್ಯವಾದ ತಂತ್ರಜ್ಞಾನ ಒದಗಿಸಿ ಎಂದು ಇಂಜಿನಿಯರಿಂಗ್ ಪದವೀಧರರಿಗೆ ಸಲಹೆ ನೀಡಿದರು.
ಭಾರತ ಈಗ ಅಗತ್ಯವಾದ ಇಂಧನದಲ್ಲಿ ಶೇ.85ರಷ್ಟನ್ನು ಹಾಗೂ ಖಾದ್ಯ ತೈಲದಲ್ಲಿ ಶೇ.60ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ರಕ್ಷಣಾ ವಲಯದಲ್ಲೂ ಆಮದು ಅವಲಂಬನೆ ಹೆಚ್ಚಾಗಿದೆ. ಕೌಶಲದ ಕೊರತೆ ಇದೆ. ಈ ಎಲ್ಲ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ನೀಗಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಲೇಖಕ ಹಾಗೂ ಶಿಕ್ಷಣ ತಜ್ಞ ಪಿ.ಬಿ. ಕೋಟೂರ ಮಾತನಾಡಿ, ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತ ಕ್ರಾಂತಿಯನ್ನೇ ಕಂಡಿದೆ. ಒಂದೇ ತಿಂಗಳಲ್ಲಿ ದೇಶದಲ್ಲಿ 10 ಶತಕೋಟಿ ವಹಿವಾಟುಗಳು ನಡೆದಿವೆ. ಇದು ಅಭಿವೃದ್ಧಿ ಹೊಂದಿದ ಮೊದಲ ನಾಲ್ಕು ದೇಶಗಳ ಒಂದು ವರ್ಷದ ವಹಿವಾಟಿಗೆ ಸಮ ಎಂದು ತಿಳಿಸಿದರು.
ಕಾಲೇಜಿನ ಕ್ಯಾಂಪಸ್‌ಗಳಿಂದ ಕಾರ್ಪೊರೇಟ್ ವಲಯಕ್ಕೆ ಬರುವವರು ವಿಶ್ಲೇಷಣಾತ್ಮಕ ಚಿಂತನೆ, ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಕಾಯಕವೇ ಕೈಲಾಸ ಎಂಬ ಭಾವನೆ ಹೊಂದಿರಬೇಕು. ಈ ಮೂರು ಗುಣಗಳನ್ನು ಭಕ್ತಿ, ಯುಕ್ತಿ ಹಾಗೂ ಶಕ್ತಿ ಎಂಬ ಸೂತ್ರಕ್ಕೆ ಹೋಲಿಸಬಹುದು. ಈ ಮೂರು ಸೇರಿದಾಗ ಕಾರ್ಪೊರೇಟ್ ವಲಯದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ರ‌್ಯಾಂಕ್ ವಿಜೇತರು, ಬಂಗಾರದ ಪದಕ ಪಡೆದವರು ಹಾಗೂ ಪ್ರಥಮ ಸ್ಥಾನ ಗಳಿಸಿದವರನ್ನು ಸನ್ಮಾನಿಸಲಾಯಿತು. ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಎಚ್.ಬಿ. ಅರವಿಂದ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಎಸ್.ಬಿ. ಮಲ್ಲಿಕಾರ್ಜುನ ಸ್ವಾಗತಿಸಿದರು. ಎಂ. ವರ್ಷಾ ಹಾಗೂ ಎಸ್.ಪಿ. ಪುನೀತ್ ನಿರೂಪಿಸಿದರು.