

ದಾವಣಗೆರೆ : ಕೃತಕ ಬುದ್ಧಿಮತ್ತೆ ಮತ್ತು ಟನಲ್ ಬೋರಿಂಗ್ ಮಷೀನ್ ತಂತ್ರಜ್ಞಾನದಲ್ಲಿ ಚೀನಾ ಮತ್ತು ಅಮೇರಿಕ ದೇಶಗಳು ಮುಂದಿವೆ. ಭಾರತದ ಇಂಜಿನಿಯರುಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಹೇಳಿದರು. ನಗರದ ಬಿ.ಐ.ಇ.ಟಿ ಕಾಲೇಜಿನ ಸಿವಿಲ್ ಸೆಮಿನಾರ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಇಂಜಿನಿಯರುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಅಭಿವೃದ್ಧಿ ಇಂಜಿನಿಯರುಗಳ ಕೈಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ಮಾತನಾಡಿ, ಭಾರತದಲ್ಲಿ ಇನ್ನೂ ಎಂ. 20 ಅಥವಾ ಎಂ. 30 ಗ್ರೇಡ್ ಕಾಂಕ್ರಿಟ್ ಬಳಸಲಾಗುತ್ತಿದೆ. ವಿದೇಶಗಳಲ್ಲಿ ಎಂ 60 ಗ್ರೇಡ್ ಕಾಂಕ್ರಿಟ್ ಉಪಯೋಗಿಸುತ್ತಿದ್ದಾರೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಇಂಜಿನಿಯರುಗಳ ದಿನಾಚರಣೆ ಮಾಡುವಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಅಂದಿನ ಮಹಾರಾಜರ ಸಹಕಾರದಿಂದ ಮೈಸೂರನ್ನು ಮಾದರಿ ರಾಜ್ಯ ಮಾಡಲು ಸಾಧ್ಯವಾಯಿತು ಎಂದರು. ಬಾಪೂಜಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಚಾರ್ಯ ಡಿ.ಕೆ. ನಾಗರಾಜಪ್ಪ ಮಾತನಾಡಿ, ಅಂದಿನ ದಿನಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪಟ್ಟಣ ಸೇರಿದಾಗ ಅನುಭವಿಸಿದ ತೊಂದರೆಗಳ ಬಗ್ಗೆ ವಿವರಿಸಿದರು. ಸಿವಿಲ್ ಇಂಜಿನಿಯರ್ ಜಿ. ಮರುಳಸಿದ್ದಪ್ಪ ಮಾತನಾಡಿದರು. ಐ.ಇ.ಐ. ದಾವಣಗೆರೆ ಅಧ್ಯಕ್ಷ ಡಾ. ಸುರೇಶ್ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕೆ. ಸಿ. ದೇವೇಂದ್ರಪ್ಪ ಅತಿಥಿಗಳ ಕಿರು ಪರಿಚಯ ಮಾಡಿದರು. ಡಾ. ಜಿ. ಮಾನವೇಂದ್ರ ವಂದಿಸಿದರು. ಬಿ.ಐ.ಇ.ಟಿ. ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.