

ದಾವಣಗೆರೆ : ಸರ್ ಎಂ. ವಿಶ್ವೇಶ್ವರಯ್ಯ ಅವರ ಸಮಯ ಪಾಲನೆ ಮತ್ತು ಕೆಲಸದ ಮೇಲಿನ ಅಪ್ರತಿಮ ನಿಷ್ಠೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಆರ್. ಅಭಿಷೇಕ್ ಹೇಳಿದರು. ನಗರದ ಜೈನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ, ಇಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ಸಲಹೆಗಾರ ಡಾ. ಮಂಜಪ್ಪ ಸಾರಥಿ ಮಾತನಾಡಿ, ಸರ್ ಎಂ.ವಿ. ಅವರು ನೀರಾವರಿ, ಅಣೆಕಟ್ಟುಗಳು ಮತ್ತು ಕೈಗಾರಿಕಾ ಅಭಿವೃದ್ಧಿ ಸೇರಿ ಅನೇಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರ ಕಾಲನಿಷ್ಠೆಯ ಮಹತ್ವವನ್ನು ಒತ್ತಿ ಹೇಳಿದರು. ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್ ಮಾತನಾಡಿ, ಸರ್ ಎಂ.ವಿ. ಅವರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಅವರು ಜೀವನದಲ್ಲಿ ಅನುಸರಿಸಬೇಕಾದ ಮಾದರಿ ವ್ಯಕ್ತಿತ್ವವಾಗಿದ್ದಾರೆಂದು ತಿಳಿಸಿದರು. ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಪಾಟೀಲ್ ಮಾತನಾಡಿ ಸರ್ ಎಂ.ವಿ. ಅವರ ನಿಖರ ಸಮಯ ಪಾಲನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ದೇಶ ನಿರ್ಮಾಣಕ್ಕೆ ಸರ್ ಎಂ.ವಿ. ನೀಡಿದ ಅಮೂಲ್ಯ ಕೊಡುಗೆಗಳನ್ನು ಅಕಾಡೆಮಿಕ್ ಡೀನ್ ಡಾ. ಪ್ರಕಾಶ್ ಕೆ.ಬಿ. ವಿವರಿಸಿ, ಮೈಸೂರಿನ ಅನೇಕ ಮನೆಗಳಲ್ಲಿ ಇಂದಿಗೂ ಅವರ ಚಿತ್ರವನ್ನು ಪೂಜಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ಸಂಯೋಜಕ ಭರತ್ ಎಚ್.ಎಂ. ವಂದಿಸಿದರು.