

ದಾವಣಗೆರೆ : ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರುಗಳ ಮಸೂದೆ ಜಾರಿ ಮೂಲಕ ಸಿವಿಲ್ ಇಂಜಿನಿಯರುಗಳಿಗೆ ಮಾನ್ಯತೆ ದೊರೆತಂತಾಗಿದೆ ಎಂದು ಮಸೂದೆಯ (ಕೆಪಿಸಿಇಎ) ಸಲಹೆಗಾರ ಡಿ. ರಂಗನಾಥ್ ಹೇಳಿದರು. ನಗರದ ಎಸ್.ಎಸ್. ಬಡಾವಣೆ ‘ಬಿ’ ಬ್ಲಾಕ್‌ನಲ್ಲಿರುವ ಎಫ್‌ಪಿಎಸಿಇ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೆಪಿಸಿಇಎ ಜಾರಿ ರೂವಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಇದುವರೆಗೆ ಸಿವಿಲ್ ಇಂಜಿನಿಯರ್ ಎಂದರೆ ಯಾರೆಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇರಲಿಲ್ಲ. ಮಸೂದೆ ಜಾರಿಯಿಂದ ಅದಕ್ಕೆ ಉತ್ತರ ದೊರೆತಿದೆ. ಜತೆಗೆ ಸಿವಿಲ್ ಇಂಜಿನಿಯರುಗಳ ಜವಾಬ್ದಾರಿ ಕೂಡ ಹೆಚ್ಚಾಗಿದೆ ಎಂದು ತಿಳಿಸಿದರು. ಇಷ್ಟು ದಿನ ಯಾರು ಬೇಕಾದರೂ ಮನೆಯ ನಕ್ಷೆ ಸಿದ್ಧಪಡಿಸಿ ಮನೆ ಕಟ್ಟಿಕೊಟ್ಟು ಇಂಜಿನಿಯರ್ ಎಂದು ಹೇಳಿಕೊಳ್ಳುತ್ತಿದ್ದರು. ಇಂತಹ ನಕಲಿ ಇಂಜಿನಿಯರುಗಳ ನಡುವೆ, ಇಂಜಿನಿಯರಿಂಗ್ ಡಿಗ್ರಿ ಪಡೆದ ನಿಜವಾದ ಸಿವಿಲ್ ಇಂಜಿನಿಯರುಗಳಿಗೆ ಬೆಲೆಯೆ ಇಲ್ಲದಂತಾಗಿತ್ತು. ಈ ಮಾನ್ಯತೆಯ ಹಿಂದೆ ಮೂರು ದಶಕಗಳ ಶ್ರಮವಿದೆ. ರಾಜ್ಯದ ಎಲ್ಲ ಇಂಜಿನಿಯರುಗಳು ಒಗ್ಗಟ್ಟಾದ ಕಾರಣ ಇದು ಸಾಧ್ಯವಾಗಿದೆ ಎಂದರು. ಕಾಯ್ದೆ ಜಾರಿಯಾಗಿರುವುದರಿಂದ ಇನ್ನು ಮುಂದೆ ಕಂಡ ಕಂಡವರು ಇಂಜಿನಿಯರ್ ಎಂದು ಹೇಳಿಕೊಳ್ಳುವಂತಿಲ್ಲ. ನೋಂದಾಯಿತ ಸಿವಿಲ್ ಇಂಜಿನಿಯರ್‌ಗೆ ಮಾತ್ರ ಮಾನ್ಯತೆ ಇರುತ್ತದೆ. ಇಂಜಿನಿಯರ್ ಅಲ್ಲದವರು ನಕ್ಷೆ ಕೊಟ್ಟು, ಮನೆ ನಿರ್ಮಿಸಿದರೆ ಕಾನೂನು ರೀತಿ ಶಿಕ್ಷೆಗೆ ಒಳಪಡುತ್ತಾರೆ. ನೋಂದಾಯಿತ ಇಂಜಿನಿಯರುಗಳ ಕಾರ್ಯ ನಿರ್ವಹಣೆ ಕೂಡ ಕಾಯ್ದೆ ವ್ಯಾಪ್ತಿಗೆ ಬರಲಿದ್ದು, ಆ ಕಾನೂನು, ನಿಯಮಗಳನ್ನು ಮೀರುವ ಇಂಜಿನಿಯರುಗಳ ಮಾನ್ಯತೆ ರದ್ದು ಮಾಡಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು. ಈಗಷ್ಟೆ ಕಾಯ್ದೆ ಜಾರಿ ನಿಟ್ಟಿನಲ್ಲಿ ಒಂದು ಭಾಗ ಪೂರ್ಣಗೊಂಡಿದೆ. ನಾವಿನ್ನೂ ಅರ್ಧ ಹಾದಿ ಕ್ರಮಿಸುವುದು ಬಾಕಿ ಇದೆ. ಕೆಪಿಸಿಇಎಗೆ ಪ್ರಸ್ತುತ ರಾಜ್ಯಪಾಲರ ಅಂಕಿತ ದೊರೆತು, ಗೆಜೆಟ್ ಘೋಷಣೆಯಾಗಿದೆ. ಸಿವಿಲ್ ಇಂಜಿನಿಯರುಗಳ ಮಾತೃ ಸಂಸ್ಥೆಯಾಗಿರುವ ಲೋಕೋಪಯೋಗಿ ಇಲಾಖೆ, ಕಾಯ್ದೆ ಮರು ಪರಿಶೀಲಿಸಿ, ಮತ್ತೊಮ್ಮೆ ಗೆಜೆಟ್ ನೋಟಿಫಿಕೇಷನ್ ಮಾಡುತ್ತದೆ ಎಂದು ಕೆಪಿಸಿಇಎ ಕನ್ಸೋರ್ಸಿಯಮ್ ಅಧ್ಯಕ್ಷ ಶ್ರೀಕಾಂತ್ ಚೆನ್ನಾಲ್ ಹೇಳಿದರು. ಕಾಯ್ದೆ ಜಾರಿಗೆ ಶ್ರಮಿಸಿದ ಶ್ರೀಕಾಂತ್ ಚೆನ್ನಾಲ್, ಡಾ.ಮನಮೋಹನ್ ಆರ್. ಕಲ್ಗಲ್, ಅಜಿತ್ ಕುಮಾರ್ ಎಸ್. ಮಗದುಮ್, ಎಚ್.ಆರ್. ಗಿರೀಶ್ ಹಾಗೂ ರಾಜೇಶ್ ಕಣ್ಣನ್ ಅವರನ್ನು ಸನ್ಮಾನಿಸಲಾಯಿತು. ಎಫ್‌ಪಿಎಸಿಇ ಅಧ್ಯಕ್ಷ ದೇವೇಂದ್ರಪ್ಪ, ಇಂಜಿನಿಯರುಗಳಾದ ಆರ್.ಟಿ. ಅರುಣ್ ಕುಮಾರ್, ಶಿವರಾಜ್ ಕುಮಾರ್, ಕೆ.ವಿ. ರೆಡ್ಡಿ, ರಾಜೇಂದ್ರ ಪ್ರಸಾದ್, ಸಂಜೀವ್ ಪ್ರಸಾದ್, ಷಣ್ಮುಖ, ನಾಗರಾಜ್, ಮಧು ಇದ್ದರು.