ಗೋಮಾಳ, ಕೆರೆ ಒತ್ತುವರಿ ತೆರವು

dvg-kabburu.jpg
Published on

ದಾವಣಗೆರೆ : ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಬುಧವಾರ, ಗೋಮಾಳ ಮತ್ತು ಕೆರೆ ಒತ್ತುವರಿ ತೆರವು ಸಂಬಂಧ ಭೂಮಾಪಕರು ನಡೆಸಿದ  ಅಳತೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಳತೆ ಮಾಡುವುದನ್ನು ಸ್ಥಗಿತಗೊಳಿಸಿ ವಾಪಸ್ ಕಳುಹಿಸಿದ ಪ್ರಸಂಗ ನಡೆಯಿತು.  ಗ್ರಾಮದ ಸರ್ಕಾರಿ ಗೋಮಾಳದಲ್ಲಿದ್ದ ಸ್ಮಶಾನದ ವಿರೂಪ, ಅಕ್ರಮವಾಗಿ ಮಣ್ಣು ಸಾಗಾಟ ಮತ್ತು ಪೂರ್ವಜರ ಸಮಾಧಿಗಳನ್ನು, ಅಸ್ಥಿಪಂಜರ ನಾಶ ಮಾಡಿದ್ದು, ಕೆರೆ ಮತ್ತು ಗೋಮಾಳ ಒತ್ತುವರಿ ತೆರವುಗೊಳಿಸಿ, ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.  ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿ, ಕಬ್ಬೂರು ಗ್ರಾಮದ ಗೋಮಾಳ ಮತ್ತು ಕೆರೆ ಜಮೀನನ್ನು ಅಳತೆ ಮಾಡಿ ಹದ್ದುಬಸ್ತ್ ಮಾಡಲು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಭೂಮಾಪಕರು ಗೋಮಾಳ ಮತ್ತು ಕೆರೆಯ ಒತ್ತುವರಿ ಅಳತೆ ಮಾಡಿದರು.  ಅಳತೆ ಮಾಡುವ ಸಂದರ್ಭದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಗ್ರಾಮಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಇದೇ ಭೂಮಾಪಕರು ಮೂರು ಬಾರಿ ಸರ್ವೇ ಮಾಡಿದ್ದರೂ ಸರಿಯಾಗಿ ಮಾಡುತ್ತಿಲ್ಲ. ಹೀಗಾಗಿ ಡಿಜಿಪಿಎಸ್ ಸರ್ವೇ ಮಾಡಲು ಪಟ್ಟು ಹಿಡಿದರು.  ನೀವು ದಾಖಲೆ ಪತ್ರಗಳಲ್ಲಿ ಇರುವಂತೆ ಸರಿಯಾಗಿ ಅಳತೆ ಮಾಡುತ್ತಿಲ್ಲ. ನಿಮ್ಮ ಮನಸಿಗೆ ತಿಳಿದಂತೆ ಅಳತೆ ಮಾಡುತ್ತಿದ್ದೀರಿ ಎಂದು ದೂರಿ, ಅಳತೆ ಮಾಡುವುದನ್ನು ಸ್ಥಗಿತಗೊಳಿಸಿ ಭೂಮಾಪಕರನ್ನು ವಾಪಸ್ ಕಳುಹಿಸಿದರು.  ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಂಗಣ್ಣ, ಕುಮಾರಣ್ಣ, ರೇವಣ್ಣ, ಚಂದ್ರಪ್ಪ, ಪ್ರಸನ್ನ, ಗ್ರಾಪಂ ಸದಸ್ಯರಾದ ಕೋಟೆಪ್ಪ, ಮಂಜುನಾಥ್, ಮಂಜುನಾಥ್ ವೈ. ಕಬ್ಬೂರು, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಸದಸ್ಯರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net