

ರಮೇಶ ಜಹಗೀರದಾರ್ ದಾವಣಗೆರೆ : ವನ್ಯಜೀವಿಗಳಾದ ಆನೆಗಳು ಕಾಡಿನಲ್ಲಿರಬೇಕು, ಸ್ವತಂತ್ರವಾಗಿ ಜೀವಿಸಬೇಕು. ಆದರೆ ಧಾರ್ಮಿಕ ಉತ್ಸವ, ಮೆರವಣಿಗೆಗಳಲ್ಲಿ ಜೀವಂತ ಆನೆಯನ್ನು ಉಪಯೋಗಿಸುವ ಪದ್ಧತಿ ನಾಡಿನ ವಿವಿಧ ಮಠಗಳಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅವುಗಳಿಗೆ ಪರ್ಯಾಯವಾಗಿ ಇತ್ತೀಚೆಗೆ ರೋಬಾಟಿಕ್ ಆನೆಗಳ ಟ್ರೆಂಡ್ ಆರಂಭವಾಗಿದೆ. ಯಾಂತ್ರಿಕ ಆನೆಗಳನ್ನು ಬಳಸುವ ಮೂಲಕ, ನಿಜ ಆನೆಗಳು ಕಾಡುಗಳಲ್ಲಿ ತಮ್ಮ ಕುಟುಂಬದೊಂದಿಗೆ ವಾಸ ಮಾಡಬಹುದು ಮತ್ತು ಅವುಗಳು ನಿರಂತರವಾಗಿ ಬಂಧನಕ್ಕೊಳಗಾಗುವ ನೋವು, ಆಯುಧಗಳ ಯಾತನೆ, ಪ್ರಕೃತಿ ಮತ್ತು ತಮ್ಮ ಅಗತ್ಯತೆಗಳಿಂದ ವಂಚಿತವಾಗಿ ಬದುಕುವುದರಿಂದ ಮುಕ್ತಿ ಪಡೆಯಬಹುದು. ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಮತ್ತು ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್(ಕುಪಾ) ಸಂಸ್ಥೆಗಳು ಯಾಂತ್ರಿಕ ಆನೆಯ ಪರಿಕಲ್ಪನೆಯನ್ನು ದೇಶಾದ್ಯಂತ ಪರಿಚಯಿಸುತ್ತಿವೆ. ಸುತ್ತೂರು ಮಠ, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ ಹಾಗೂ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸಿಂಹಾಸನ ಪೀಠಕ್ಕೆ ಈಗಾಗಲೇ ಯಾಂತ್ರಿಕ ಆನೆಗಳನ್ನು ನೀಡಲಾಗಿದೆ. ರಾಜ್ಯದ 4ನೇ ಹಾಗೂ ಜಿಲ್ಲೆಯ ಮೊದಲ ರೋಬಾಟಿಕ್ ಆನೆ ‘ಉಮಾ ಮಹೇಶ್ವರ’ ಚನ್ನಗಿರಿ ತಾಲೂಕು ತಾವರೆಕೆರೆಯ ಶಿಲಾಮಠದಲ್ಲಿ ಭಾನುವಾರ ಲೋಕಾರ್ಪಣೆಗೊಳ್ಳಲಿದೆ. ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ ಬೆಂಬಲದೊಂದಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಪೆಟಾ ಇಂಡಿಯಾ-ಥ್ಯಾಕರ್ಸಿ ಗ್ರೂಪ್ ಈ ಆನೆಯನ್ನು ಪ್ರಾಯೋಜಿಸಿವೆ. ಇದರ ಮೌಲ್ಯ 15 ಲಕ್ಷ ರೂ. ತಾವರೆಕೆರೆಯ ಶಿಲಾಮಠದಲ್ಲಿರುವ ಶ್ರೀ ಉಮಾಮಹೇಶ್ವರ ವೀರಭದ್ರೇಶ್ವರ ದೇವಸ್ಥಾನವು ಇನ್ನು ಮುಂದೆ ಜೀವಂತ ಆನೆಯನ್ನು ಬಾಡಿಗೆ ಪಡೆಯುವುದಿಲ್ಲ ಅಥವಾ ಸಾಕುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡ ಹಿನ್ನಲೆಯಲ್ಲಿ, ಅದನ್ನು ಗೌರವಿಸಿ ಉಮಾ ಮಹೇಶ್ವರನನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ... (ಬಾಕ್ಸ್) ವಿಶೇಷತೆಗಳು * 800 ಕೆ.ಜಿ ತೂಕದ 3 ಅಡಿ ಎತ್ತರ * ಸಿಲಿಕಾನ್ ಫೈಬರ್ ಮಟೀರಿಯಲ್ ಬಳಕೆ * ಕಣ್ಣು ಮಿಟುಕಿಸುತ್ತದೆ * ಬಾಲ ಮತ್ತು ಕಿವಿಯನ್ನು ಅಲ್ಲಾಡಿಸುತ್ತದೆ * ಸೊಂಡಿಲು ಎತ್ತುತ್ತದೆ * ಬ್ಯಾಟರಿ ಚಾಲಿತ ಟ್ರಾಲಿಯಲ್ಲಿ ಸಂಚಾರ * ನಿಜವಾದ ಆನೆಯನ್ನೇ ನೋಡಿದ ಅನುಭವ .