

ದಾವಣಗೆರೆ : ಹರಪನಹಳ್ಳಿಯಲ್ಲಿ ಇಂಡಿಯ ರಿಸರ್ವ್ ಬೆಟಾಲಿಯನ್ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದರು.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಿಂಗ್ರಿಹಳ್ಳಿಯಲ್ಲಿ ಶನಿವಾರ ಮತಯಾಚನೆ ಮಾಡಿ ಮಾತನಾಡಿದರು. ಈ ವಿಷಯವಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮುಖಾಂತರ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ, ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಮಂಜೂರಾತಿ ಮಾಡಿಕೊಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರಿದ್ದರೂ ಈ ಕ್ಷೇತ್ರದ ಜನ ದಾವಣಗೆರೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಪರ್ಕ ಕಚೇರಿ ತೆರೆಯುವ ಉದ್ದೇಶವಿದೆ ಎಂದು ತಿಳಿಸಿದರು. ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಮಾತನಾಡಿದರು.