

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಭ್ಯರ್ಥಿಗಳು ಮತ ಬೇಟೆಗೆ ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಶುಕ್ರವಾರ ನಡೆಸಿದ ಪ್ರಚಾರದ ವೈಖರಿ ಗಮನ ಸೆಳೆಯಿತು. ಎಂದಿನಂತೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ಬದಲಾಗಿ ಅವರು ವಿಭಿನ್ನ ರೀತಿಯಲ್ಲಿ ಮತದಾರರನ್ನು ತಲುಪುವ ಪ್ರಯತ್ನ ಮಾಡಿದರು.
ನಗರದ ಇಂಡಿಯನ್ ಕಾಫಿ ಬಾರ್ ಕೇವಲ ಚಹಾ, ಕಾಫಿ ಮಾರಾಟವಾಗುವ ಹೋಟೆಲ್ ಅಷ್ಟೇ ಅಲ್ಲ, ಅದೊಂದು ಮೀಟಿಂಗ್ ಪಾಯಿಂಟ್. ವಿವಿಧ ಕ್ಷೇತ್ರಗಳ ಜನರು ಅಲ್ಲಿಗೆ ಬರುತ್ತಾರೆ. ನಿತ್ಯವೂ ಅಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತದೆ. ಹೀಗಾಗಿ ಜನರನ್ನು ಭೇಟಿ ಮಾಡಲು ಅದೊಂದು ಸೂಕ್ತ ಜಾಗ.
ಇದರ ಅರಿವಿದ್ದುದರಿಂದ ಪ್ರಭಾ ಮಲ್ಲಿಕಾರ್ಜುನ್ ಇಂಡಿಯನ್ ಕಾಫಿ ಬಾರ್‌ಗೆ ಬೆಳಗ್ಗೆ ಎಂಟ್ರಿ ಕೊಟ್ಟರು. ಕಾಫಿ ಸೇವನೆ ಮಾಡಿ ಅಲ್ಲಿಗೆ ಬಂದಿದ್ದ ಹಿರಿಯರು, ಯುವಕರೊಂದಿಗೆ ಮಾತನಾಡಿದರು. ತಾವು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದನ್ನು ತಿಳಿಸಿ ಮತ ಯಾಚನೆ ಮಾಡಿದರು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಸಾಧನೆಗಳ ಬಗ್ಗೆ ಹೇಳಿದರು.
ಅದಕ್ಕೂ ಮೊದಲು ನಗರದ ವಿಶ್ವೇಶ್ವರಯ್ಯ ಪಾರ್ಕ್‌ಗೆ ತೆರಳಿ ವಾಯು ವಿಹಾರಿಗಳೊಂದಿಗೆ ಮಾತನಾಡಿದರು. ಯುವಕರು, ಹಿರಿಯರ ಜತೆ ಬೆರೆತು ಮತ ಯಾಚನೆ ಮಾಡಿದರು. ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಕಾಸಲ್ ವಿಠ್ಠಲ್ ಪಾರ್ಕ್‌ನೊಳಗೊಂದು ಸುತ್ತು ಹಾಕಿ ಅಲ್ಲಿ ಬಂದಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿದರು. ಬಿಸಿಲು ಏರುವ ಮುನ್ನ ವಿವಿಧ ಉದ್ಯಾನಗಳಿಗೆ ತೆರಳಿ ಮತ ಬೇಟೆಯಾಡಿದರು.
...
(((ಬಾಕ್ಸ್)))
* ಸಿಟಿ ಬಸ್‌ನಲ್ಲಿ ಪ್ರಯಾಣ
ಸಂಜೆ ಕೆಎಸ್‌ಆರ್‌ಟಿಸಿಯ ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಪ್ರಭಾ ಮಲ್ಲಿಕಾರ್ಜುನ್ ಗಮನ ಸೆಳೆದರು.
ಕಂಡಕ್ಟರ್‌ಗೆ ಆಧಾರ್ ಕಾರ್ಡ್ ತೋರಿಸಿ ಇಲ್ಲಿನ ಅರಳಿಮರ ವೃತ್ತದಲ್ಲಿ ಬಸ್ ಏರಿದ ಪ್ರಭಾ, ಸಾಮಾನ್ಯ ಪ್ರಯಾಣಿಕರಂತೆ ಬಸ್‌ನ ಸೀಟಿನಲ್ಲಿ ಕುಳಿತು ಪ್ರಯಾಣಿಸಿದರು. ಬಸ್ಸಿನಲ್ಲಿದ್ದ ಮಹಿಳೆಯರನ್ನು ಮಾತನಾಡಿಸಿ ‘ಶಕ್ತಿ’ ಯೋಜನೆಯ ಕುರಿತು ಅರಿವು ಮೂಡಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು.
ಮಹಾನಗರ ಪಾಲಿಕೆ ಬಳಿ ಆ ಬಸ್ಸಿನಿಂದ ಇಳಿದ ಅವರು, ಬಸ್ ತಂಗುದಾಣದಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರ ಪಕ್ಕದಲ್ಲಿ ಕುಳಿತು ಅವರೊಂದಿಗೆ ಮಾತನಾಡಿದರು. ಈ ಚುನಾವಣೆ ಎಷ್ಟು ಮಹತ್ವ ಪಡೆದಿದೆ, ಮತದಾರರು ಯೋಚನೆ ಮಾಡಿ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು. ಅಲ್ಲಿಂದ ಮತ್ತೊಂದು ಬಸ್ ಹತ್ತಿ ಎಸ್.ಎಸ್, ಆಸ್ಪತ್ರೆ ವರೆಗೆ ಪ್ರಯಾಣಿಸಿದರು.