

ದಾವಣಗೆರೆ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 2025-2030 ನೇ ಸಾಲಿನ ಜಿಲ್ಲಾ ಪ್ರತಿನಿಧಿಗಳಾಗಿ ವಿ. ಭಾನುಪ್ರಕಾಶ್ ಶರ್ಮ ಗುಂಪಿನ ಸಿ.ಕೆ. ಆನಂದತೀರ್ಥಾಚಾರ್ ದಾವಣಗೆರೆ ಜಿಲ್ಲೆಯಿಂದ ಹಾಗೂ ಟಿ.ಕೆ. ನಾಗರಾಜರಾವ್ ಚಿತ್ರದುರ್ಗ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಎರಡೂ ಜಿಲ್ಲೆಗಳ ಪ್ರತಿನಿಧಿಗಳ ಹಾಗೂ ರಾಜ್ಯಾಧ್ಯಕ್ಷರ ಚುನಾವಣೆಗೆ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಿದ್ದ 2 ಮತಗಟ್ಟೆಗಳಲ್ಲಿ ಭಾನುವಾರ ಮತದಾನ ನಡೆಯಿತು. ದಾವಣಗೆರೆ ಜಿಲ್ಲೆಯ ಒಟ್ಟು 1256 ಮತಗಳಲ್ಲಿ 885 ಮತಗಳು ಚಲಾವಣೆಯಾದವು. ಸಿ.ಕೆ. ಆನಂದತೀರ್ಥಾಚಾರ್ 534 ಮತಗಳನ್ನು ಪಡೆದು, 216 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಎಸ್. ರಘುನಾಥ್ ಗುಂಪಿನ ಎನ್.ಆರ್. ನಾಗಭೂಷಣ ರಾವ್ 318 ಮತ ಗಳಿಸಿದರು. 33 ಮತಗಳು ಅಸಿಂಧುವಾದವು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿ. ಭಾನುಪ್ರಕಾಶ್ ಶರ್ಮ ಅವರಿಗೆ ದಾವಣಗೆರೆ ಜಿಲ್ಲೆಯಲ್ಲಿ 527, ಎಸ್. ರಘುನಾಥ್ ಅವರಿಗೆ 317 ಮತಗಳು ಚಲಾವಣೆಯಾದವು. 41 ಮತಗಳು ಅಸಿಂಧುಗೊಂಡವು. ಚಿತ್ರದುರ್ಗ ಜಿಲ್ಲೆಯ ಒಟ್ಟು 451 ಮತಗಳಲ್ಲಿ 227 ಮತಗಳು ಚಲಾವಣೆಯಾದವು. ಟಿ.ಕೆ. ನಾಗರಾಜ ರಾವ್ 160 ಮತಗಳನ್ನು ಪಡೆದು 100 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ, ಎಸ್. ರಘುನಾಥ್ ಗುಂಪಿನ ವಿ. ವಾದಿರಾಜ 60 ಮತ ಗಳಿಸಿದರು. 7 ಮತಗಳು ಅಸಿಂಧುವಾದವು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿ. ಭಾನುಪ್ರಕಾಶ್ ಶರ್ಮ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ 152, ಎಸ್. ರಘುನಾಥ್ ಅವರಿಗೆ 55 ಮತಗಳು ಬಂದವು. 20 ಮತಗಳು ಅಸಿಂಧುಗೊಂಡವು. ಸಹಕಾರ ಅಭಿವೃದ್ಧಿ ಅಧಿಕಾರಿ ಎಲ್. ಸತೀಶ ನಾಯ್ಕ ಅವರು ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.