ಸುವ್ಯವಸ್ಥಿತ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

dvg-dc-press-meet-01.jpg
Published on

ದಾವಣಗೆರೆ : ಜೂನ್ 4ರಂದು ಲೋಕಸಭಾ ಚುನಾವಣೆಯ ಮತಗಳ ಎಣಿಕೆಯನ್ನು ಸುವ್ಯವಸ್ಥಿತವಾಗಿ ನಡೆಸಲು ದಾವಣಗೆರೆ ವಿಶ್ವವಿದ್ಯಾಲಯ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
 ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 6.30 ಕ್ಕೆ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. 8 ಗಂಟೆಯಿಂದ ಎಣಿಕೆ ಆರಂಭವಾಗಲಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಸಿಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
 ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಮಾಡಲಾಗುವುದು. ನಂತರ ಇ.ವಿ.ಎಂ. ಮತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ನಿಗದಿಪಡಿಸಲಾಗಿದೆ. ಒಂದು ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ, ಒಬ್ಬ ಮೈಕ್ರೋ ಆಬ್ಸರ್ವರ್‌ನಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ 336 ಎಣಿಕಾ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
 ಮತ ಯಂತ್ರಗಳ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಒಂದು ವಿಧಾನಸಭಾ ಕ್ಷೇತ್ರದಿಂದ 5 ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು. ಆ 5 ವಿವಿಪ್ಯಾಟ್‌ಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
 ಪ್ರತಿಯೊಬ್ಬ ಎಣಿಕೆ ಮೇಲ್ವಿಚಾರಕರು ತಮ್ಮ ಟೇಬಲ್‌ನಲ್ಲಿ ಎಣಿಕೆ ಮಾಡಿದ ಅಂಕಿ ಅಂಶಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸುವರು. ಅವುಗಳನ್ನು ಪರಿಶೀಲಿಸಿ ಸಹಾಯಕ ಚುನಾವಣಾಧಿಕಾರಿಗಳು ಚುನಾವಣಾಧಿಕಾರಿಗೆ ನೀಡುವರು. ಅದರ ಆಧಾರದ ಮೇಲೆ ಚುನಾವಣಾಧಿಕಾರಿ ಪ್ರತಿ ಸುತ್ತಿನ ಫಲಿತಾಂಶ ಪ್ರಕಟಿಸುವರು ಎಂದರು.
 ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, 2019 ರ ಚುನಾವಣೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಮತದಾನ ಪ್ರಮಾಣ ಶೇ. 4ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.
 ...
 (ಬಾಕ್ಸ್)
 3 ಹಂತದ ಭದ್ರತಾ ವ್ಯವಸ್ಥೆ
 ಎಣಿಕಾ ಕೇಂದ್ರದ ಆವರಣದಲ್ಲಿ 3 ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಣಿಕಾ ಕೇಂದ್ರದ ಆವರಣದಿಂದ 100 ಮೀಟರ್ ದೂರದಲ್ಲಿ ಮೊದಲನೆ ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅಲ್ಲಿಂದ ಒಳಗಡೆ ಅನ್ಯ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿರುತ್ತದೆ.
 ಎರಡನೇ ಹಂತದ ಭದ್ರತಾ ವ್ಯವಸ್ಥೆಯನ್ನು ಎಣಿಕೆ ಕಟ್ಟಡದ ಪ್ರವೇಶ ದ್ವಾರದಲ್ಲಿ ಕಲ್ಪಿಸಲಾಗಿದ್ದು, ಇಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಡಿಜಿಟಲ್ ವಾಚ್, ಇತರೆ ಎಲೆಕ್ಟ್ರಾನಿಕ್ ಉಪಕರಣಗಳು, ಕತ್ತರಿ, ಚಾಕು ಇನ್ನಿತರೆ ಹರಿತವಾದ ವಸ್ತುಗಳು, ಲೈಟರ್, ಬೆಂಕಿ ಪೊಟ್ಟಣ ಇತರೆ ಅಪಾಯಕಾರಿ ವಸ್ತುಗಳನ್ನು ಎಣಿಕೆ ಕೇಂದ್ರದೊಳಗೆ ತೆಗೆದುಕೊಂಡು ಹೋಗದಂತೆ ಫ್ರಿಸ್ಕಿಂಗ್ ನಡೆಸಲಾಗುತ್ತದೆ.
 ಮೂರನೇ ಹಂತದ ಭದ್ರತಾ ವ್ಯವಸ್ಥೆಯನ್ನು ಎಣಿಕಾ ಕೊಠಡಿಯ ದ್ವಾರದಲ್ಲಿ ನಿರ್ಮಿಸಲಾಗಿರುತ್ತದೆ. ಇಲ್ಲಿಯೂ ಕೂಡ ಫ್ರಿಸ್ಕಿಂಗ್ ಕಾರ್ಯವನ್ನು ನಡೆಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net