ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ

dvg-uttara-dwara.jpg
Published on

ದಾವಣಗೆರೆ :  ಜಿಲ್ಲಾದ್ಯಂತ ಶುಕ್ರವಾರ, ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಕಳೆ ತುಂಬಿತ್ತು. ಭಕ್ತರು ದೊಡ್ಡ ದೊಡ್ಡ ಸಾಲುಗಳಲ್ಲಿ ಕಾದು ನಿಂತು ಭಗವಂತನ ದರ್ಶನ ಪಡೆದರು. ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ ಕೇಳಿಬಂದಿತು.  ಬೆಳಗಿನ ಜಾವದಿಂದಲೇ ದೇಗುಲಗಳಲ್ಲಿ ವಿಶೇಷ ಪೂಜೆಗಳು ಆರಂಭವಾದವು. ದೇವಸ್ಥಾನಗಳ ಆವರಣವನ್ನು ಹೂವು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.  ವಯೋ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಒಟ್ಟಾಗಿ ಬಂದರು. ಸಾಲಿನಲ್ಲಿ ನಿಂತಾಗಲೂ ಶ್ರೀನಿವಾಸನ ಧ್ಯಾನದಲ್ಲೇ ಮುಳುಗಿದ್ದರು. ಹಲವು ಸೇವೆಗಳನ್ನು ಮಾಡಿಸಿ ಭಕ್ತಿಯನ್ನು ಸಮರ್ಪಿಸಿದರು. ಕೆಲವರು ದೇವರ ನಾಮಗಳನ್ನು ಹಾಡುತ್ತಲೇ ಮುಂದೆ ಸಾಗಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ವಿವಿಧ ವರ್ಗಗಳ ಗಣ್ಯರು ಭಗವಂತನ ದರ್ಶನ ಪಡೆದರು.  ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತ ಸಾಗರ ಹರಿದು ಬಂದಿತು. ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಭಕ್ತರ ಸಾಲು ಬೆಳೆಯುತ್ತಲೇ ಇತ್ತು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಶೇಷ ದರ್ಶನ, ಸರ್ವಸೇವೆ ಮಾಡಿದವರಿಗೆ ಮತ್ತು ದಾನಿಗಳಿಗೆ ಪ್ರತ್ಯೇಕ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಟ್ರಸ್ಟ್‌ನ ಸದಸ್ಯರು, ಭಕ್ತರು, ಸ್ವಯಂ ಸೇವಕರು ವ್ಯವಸ್ಥೆಯನ್ನು ನೋಡಿಕೊಂಡರು. ಕೆಲ ಭಕ್ತರು ವೈಯಕ್ತಿಕವಾಗಿ ಪ್ರಸಾದ ಸೇವೆ ಕೈಗೊಂಡರು.  ...  (ಬಾಕ್ಸ್)  ಉತ್ತರ ದ್ವಾರ ದರ್ಶನ  ವೆಂಕಟೇಶ್ವರ ಸ್ವಾಮಿಗೆ ಬಣ್ಣ ಬಣ್ಣದ ಹೂವುಗಳು ಮತ್ತು ಸರ್ವಾಭರಣಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಬೆಳಗಿನ ಜಾವ 5 ಗಂಟೆಯಿಂದಲೇ ವಿಶೇಷ ಪೂಜೆ ಆರಂಭವಾಯಿತು. ನಂತರ ಉತ್ತರ ಬಾಗಿಲು ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ರ ವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.  ದೇವಸ್ಥಾನದ ಉತ್ತರ ಬಾಗಿಲಿನಲ್ಲಿ ಗರುಡ ವಾಹನನಾದ ಶ್ರೀಮನ್ನಾರಾಯಣನ ದರ್ಶನ ಮಾಡಿ ಭಕ್ತರು ಧನ್ಯತಾ ಭಾವ ಅನುಭವಿಸಿದರು. ‘ವೈಕುಂಠ ಏಕಾದಶಿಯಂದು ಉತ್ತರ ದ್ವಾರದಲ್ಲಿ ಸ್ವಾಮಿಯ ದರ್ಶನ ಪಡೆದರೆ ಐಶ್ವರ್ಯ, ಆರೋಗ್ಯ, ಸೂಕ್ತ ಕಾಲದಲ್ಲಿ ಮೋಕ್ಷ ದೊರೆಯುತ್ತದೆ. ಈ ದಿನದಂದು ಏಕಾದಶಿ ವ್ರತವನ್ನು ಆಚರಿಸಿದರೆ 23 ಏಕಾದಶಿ ಮಾಡಿದ ಫಲ ಬರುತ್ತದೆ’ ಎಂದು, ಎಂಸಿಸಿ ‘ಬಿ’ ಬ್ಲಾಕ್‌ನ ವೆಂಕಟೇಶ್ವರ ಸ್ವಾಮಿ ದೇಗುಲದ ಪ್ರಧಾನ ಟ್ರಸ್ಟಿ ಎಂ.ಎನ್. ರಾಮಮೋಹನ್ ತಿಳಿಸಿದರು.  ...  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net