

ದಾವಣಗೆರೆ : ಕಳೆದ ಒಂದು ದಶಕದಿಂದ ದೇಶದಲ್ಲಿ ಉನ್ನತ ಶಿಕ್ಷಣ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪದ್ಮಭೂಷಣ ಪ್ರೊ. ಪಿ. ಬಲರಾಮ್ ಕಳವಳ ವ್ಯಕ್ತಪಡಿಸಿದರು. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 12ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆ, ಬೋಧಕರ ಸಂಖ್ಯೆ ಕಡಿಮೆಯಿದೆ. ಇದ್ದರೂ ಶಾಶ್ವತ ಸಿಬ್ಬಂದಿ ಇಲ್ಲ. ದೇಶಾದ್ಯಂತ ಇದೇ ಪರಿಸ್ಥಿತಿ ಇದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು. ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ ಎಂದ ಮೇಲೆ ಉನ್ನತ ಶಿಕ್ಷಣಕ್ಕೆ ಹಣದ ಕೊರತೆ ಆಗಬಾರದು. ಅಲ್ಲದೇ ಸರ್ಕಾರಗಳಿಗೆ ವಿವಿಧ ತೆರಿಗೆಗಳ ರೂಪದಲ್ಲಿ ಆದಾಯ ಬರುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತಂದು ಇತರ ರಾಜ್ಯಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಐವತ್ತು ವರ್ಷಗಳ ಹಿಂದೆ ಇದ್ದ ವಿಶ್ವವಿದ್ಯಾಲಯಗಳ ಸ್ವರೂಪ ಮತ್ತು ಗುಣಮಟ್ಟ ಈಗ ಇಲ್ಲ. ವಿವಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಗುಣಮಟ್ಟ ಕಡಿಮೆಯಾಗಿದೆ ಎಂದು ವಿಷಾದಿಸಿದರು. ನೀತಿಗಳನ್ನು ರೂಪಿಸಿದರೆ ಸಾಲದು, ಅವುಗಳು ಸಮರ್ಪಕವಾಗಿ ಜಾರಿಯಾಗುವುದು ಮುಖ್ಯ ಎಂದರು. ವಿಶ್ವವಿದ್ಯಾಲಯಗಳಲ್ಲಿ ವಿವಿಧ ವಿಷಯಗಳ ಬೋಧನೆಯಾಗಬೇಕು, ವಿಚಾರಗಳ ವಿನಿಮಯಕ್ಕೆ ಅವಕಾಶ ಇರಬೇಕು. ಸಂಗೀತ, ಸಂಸ್ಕೃತ ಹೀಗೆ ಒಂದೊಂದು ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯ ಮಾಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು. ... (ಬಾಕ್ಸ್) ಸಮಾರಂಭದಲ್ಲಿ ಶಿಸ್ತು ಕಳೆದ ಬಾರಿ ಘಟಿಕೋತ್ಸವ ನಡೆದಾಗ ಸಮಾರಂಭ ನಡೆಯುತ್ತಿದ್ದ ವೇಳೆ ಕೆಲವು ವಿದ್ಯಾರ್ಥಿಗಳು ಎದ್ದು ಬಂದಿದ್ದರ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿ ವಿವಿ ಆಡಳಿತ ಹೆಚ್ಚು ಕಾಳಜಿ ವಹಿಸಿ ಶಿಸ್ತಿನಿಂದ ಆಯೋಜನೆ ಮಾಡಿದ್ದರಿಂದ ಯಾವುದೇ ಗೊಂದಲ ಇರಲಿಲ್ಲ. ಇದನ್ನು ಗಮನಿಸಿದ ರಾಜ್ಯಪಾಲ ಗೆಹಲೋತ್ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಕಳೆದ ಬಾರಿ ವಿದ್ಯಾರ್ಥಿಗಳ ಉತ್ಸಾಹ ಅಗತ್ಯಕ್ಕಿಂತ ಹೆಚ್ಚಾಗಿಯೇ ಇತ್ತು, ಈ ಬಾರಿ ಶಿಸ್ತಿನಿಂದ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರೂ ಅದೇ ರೀತಿ ಅಭಿಪ್ರಾಯಪಟ್ಟರು. ... (ಚಿನ್ನದ ಪದಕ ವಿಜೇತರ ಪ್ರತಿಕ್ರಿಯೆಗಳು) ಬಸ್ ಸೌಲಭ್ಯ ಹೆಚ್ಚಿಸಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಓದಲು ಬರುವ ವಿದ್ಯಾರ್ಥಿಗಳು ಸರಿಯಾಗಿ ಬಸ್ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸಬೇಕು ಎಂದು, ವಾಣಿಜ್ಯಶಾಸ್ತ್ರ (ಎಂ.ಕಾಂ.) ವಿಭಾಗದಲ್ಲಿ ಪ್ರಥಮ ರ‌್ಯಾಂಕ್‌ನೊಂದಿಗೆ 6 ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿನಿ ಐ.ಕೆ. ರಿಯಾ ಮನವಿ ಮಾಡಿದರು. ಹರಿಹರ ನಿವಾಸಿಯಾಗಿರುವ ರಿಯಾ, ದಾವಣಗೆರೆ ವಿವಿ ಶಿವಗಂಗೋತ್ರಿಯಲ್ಲಿ ಎಂ.ಕಾಂ. ಓದುವಾಗ ದಿನವೂ ಹರಿಹರದಿಂದ ದಾವಣಗೆರೆಗೆ ಬಂದು, ಇಲ್ಲಿಂದ ಮತ್ತೊಂದು ಬಸ್ ಹಿಡಿದು ತೋಳಹುಣಸೆಗೆ ಹೋಗುತ್ತಿದ್ದರು. ತಮ್ಮಂತೆ ಬಹಳಷ್ಟು ವಿದ್ಯಾರ್ಥಿಗಳು ಈ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ನಾನು ಡಾಕ್ಟರ್ ಆಗಬೇಕು ಎಂಬುದು ಅಪ್ಪನ ಅಪೇಕ್ಷೆಯಾಗಿತ್ತು. ಹಾಗಾಗಿ ನಾನು ಪಿಯುಸಿಯಲ್ಲಿ ಮೊದಲು ವಿಜ್ಞಾನ ವಿಭಾಗಕ್ಕೆ ದಾಖಲಾದೆ. ಆದರೆ ಅದು ನನ್ನ ಆಸಕ್ತಿಯ ವಿಷಯವಲ್ಲ ಎಂದು ಮನದಟ್ಟಾಗಿದ್ದರಿಂದ ಕಾಮರ್ಸ್ ವಿಷಯ ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದರು. ಚಿತ್ರ: ಡಿವಿಜಿ ಐ.ಕೆ. ರಿಯಾ ದಾವಣಗೆರೆ ವಿವಿಯಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ 6 ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿನಿ ಐ.ಕೆ. ರಿಯಾಗೆ ತಂದೆ ಎಚ್. ಕುಬೇರ್ ನಾಯ್ಕ್- ತಾಯಿ ರಶ್ಮಿ ಅವರು ಮುತ್ತಿಟ್ಟು ಸಂತಸ ಹಂಚಿಕೊಂಡರು. ... (ಬಾಕ್ಸ್) ಆಟೋ ಚಾಲಕನ ಪುತ್ರಿ ಚಿತ್ರದುರ್ಗದ ಆಟೋ ಚಾಲಕ ತಿಪ್ಪೇಸ್ವಾಮಿ ಅವರ ಪುತ್ರಿ ಆರ್.ಟಿ. ಶಾಶ್ವತಾ, ಎಂ.ಎ. (ಎಕನಾಮಿಕ್ಸ್) ನಲ್ಲಿ 4 ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಚಿತ್ರದುರ್ಗದ ಸ್ನಾತಕೋತ್ತರ ಕೇಂದ್ರದಲ್ಲಿ ಓದಿರುವ ಶಾಶ್ವತಾ ಅವರಿಗೆ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕಿ ಆಗಬೇಕು ಎಂಬ ಕನಸು ಹೊಂದಿದ್ದಾರೆ. ಚಿತ್ರ: ಆರ್.ಟಿ. ಶಾಶ್ವತಾ (ಮಗ್‌ಶಾಟ್) ... (ಬಾಕ್ಸ್) ಪ್ರಾಧ್ಯಾಪಕಿ ಆಗುವ ಕನಸು ಎಂ.ಎ. ಇಂಗ್ಲಿಷ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಪಡೆದ ಎಸ್. ಸ್ನೇಹಾ ಪ್ರಸ್ತುತ ಎಂ.ಎಂ. ಕಾಲೇಜಿನಲ್ಲಿ ಬಿ.ಇಡಿ ಮಾಡುತ್ತಿದ್ದು ಪಿಎಚ್.ಡಿ ಮಾಡುವ ಆಸೆ ಹೊಂದಿದ್ದಾರೆ. ಸಹಾಯಕ ಪ್ರಾಧ್ಯಾಪಕಿ ಆಗಬೇಕು ಎಂಬುದು ಅವರ ಮೊದಲ ಗುರಿಯಾಗಿದ್ದು, ಅದಾದ ನಂತರ ಐಎಎಸ್ ಪರೀಕ್ಷೆ ಬರೆಯುವ ಉದ್ದೇಶ ಹೊಂದಿದ್ದಾರೆ. ಅವರ ತಾಯಿ ನರಸಮ್ಮ ಹರಿಹರದಲ್ಲಿ ಎಸ್.ಡಿ.ಎ ಆಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರ: ಡಿವಿಜಿ ಎಸ್. ಸ್ನೇಹಾ (ಮಗ್‌ಶಾಟ್) ... (ಬಾಕ್ಸ್) ನ್ಯಾಯಾಧೀಶೆ ಆಗುವ ಗುರಿ ಬಿಎಸ್‌ಸಿನಲ್ಲಿ ಮೊದಲ ರ‌್ಯಾಂಕ್‌ನೊಂದಿಗೆ ಚಿನ್ನದ ಪದಕ ಪಡೆದಿರುವ ರಕ್ಷಾ ವಿ. ಆನಂದ್‌ಗೆ ತಂದೆಯಂತೆ ನ್ಯಾಯಾಧೀಶೆ ಆಗಬೇಕು ಎನ್ನುವ ಇಚ್ಛೆ ಇದೆಯಂತೆ. ತಂದೆ ಜೆ.ವಿ. ವಿಜಯಾನಂದ ಪ್ರಸ್ತುತ ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ ಆಗಿದ್ದಾರೆ. ತಾಯಿ ಬಿ.ಕೆ. ಭವಾನಿ ಗೃಹಿಣಿ. ಸದ್ಯ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ರಕ್ಷಾ ನ್ಯಾಯಾಂಗದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದಾರೆ.