

ದಾವಣಗೆರೆ : ಜಿಲ್ಲೆಯ ದಕ್ಷಿಣ ವಲಯದಲ್ಲಿ ಗುಣಾತ್ಮಕ ಶಿಕ್ಷಣ ಕೋಶ ಆರಂಭಿಸಲಾಗಿದ್ದು, ಇದು ಯಶಸ್ವಿಯಾದರೆ ಜಿಲ್ಲಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯೆ ಗೀತಾ ತಿಳಿಸಿದರು.
ಶಾಲೆಗಳಲ್ಲಿ ಗುಣಾತ್ಮಕತೆ ಕುರಿತು ಡಯಟ್ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಯಾವ ಶಾಲೆ ಚೆನ್ನಾಗಿದೆ, ಗುಣಾತ್ಮಕತೆಯಿಂದ ಕೂಡಿದೆ ಎಂಬುದನ್ನು ನೋಡುತ್ತಾರೆ. ಈ ನಿಟ್ಟಿನಲ್ಲಿ ಎಲ್‌ಕೆಜಿ ಅಥವಾ ಒಂದನೇ ತರಗತಿಯಿಂದಲೇ ಗುಣಾತ್ಮಕತೆ ಶುರು ಆಗಬೇಕು. ಹೆಚ್ಚು ಸಂಪನ್ಮೂಲ ಸೃಷ್ಟಿಸುವ ಮೂಲಕ ಶಿಕ್ಷಣದ ಗುಣಾತ್ಮಕತೆ ಹೆಚ್ಚಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಬೇರೆ ಕೆಲಸಗಳ ಹೊರೆಯಲ್ಲಿ ಶಾಲೆಗಳಲ್ಲಿ ಗುಣಾತ್ಮಕತೆ ಸ್ವಲ್ಪ ಮಂಕಾಗಿದೆ. ಶಿಕ್ಷಕರಲ್ಲಿ ಇನ್ನೂ ಹೆಚ್ಚು ಖಾತ್ರಿಯೊಂದಿಗೆ ಗುಣಾತ್ಮಕತೆ ವೃದ್ಧಿಸುವ ಕೆಲಸ ಮಾಡಬೇಕು. ಶಿಕ್ಷಕರು ಸಹ ಹೊಸದಾಗಿ ನಾವೇನು ಮಾಡಬಹುದು ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕತೆ ಇಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಪ್ರತಿವರ್ಷ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಇನ್ನು 10-15 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿಯೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕಿಸಿದರು.
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಮಾದರಿ ಶಾಲೆಗಳನ್ನಾಗಿ ಮಾಡಬೇಕು. ಇಂಗ್ಲೀಷ್ ಮಾಧ್ಯಮದ ಶಿಕ್ಷಣ ನೀಡಬೇಕು. ಸ್ಮಾರ್ಟ್ ಕ್ಲಾಸ್ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಗುಣಾತ್ಮಕ ಶಿಕ್ಷಣ ಕೋಶ ಸ್ಥಾಪನೆ ಮಾಡಲಾಗಿದೆ. ಇದರಡಿ ದಾನಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಶಾಲೆ ದತ್ತು ತೆಗೆದುಕೊಳ್ಳುವ ಅವಕಾಶವಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ ಎಂಬುದನ್ನು ನಿರೂಪಿಸಲು ಹೊಸ ಎಜ್ಯುಕೇಷನ್ ಚಾನೆಲ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ಗುಣಾತ್ಮಕ ಶಿಕ್ಷಣದ ಕುರಿತು ಉಪನ್ಯಾಸ ನೀಡಿ ಜ್ಞಾನ, ಕೌಶಲ, ಅನುಭವ ಹಾಗೂ ಸಾಮರ್ಥ್ಯಗಳು ಸೂಕ್ತ ಸ್ಥಳದಲ್ಲಿದ್ದರೆ ಮಾತ್ರ ಉಪಯೋಗಕ್ಕೆ ಬರುತ್ತವೆ. ಗುಣಾತ್ಮಕತೆ ಹೆಚ್ಚಿಸಲು ಸಂಪನ್ಮೂಲ ವ್ಯಕ್ತಿಗಳು ತಮ್ಮ ಜ್ಞಾನ ಧಾರೆಯೆರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಎಚ್.ಕೆ. ಲಿಂಗರಾಜು ಅವರು ರಚಿಸಿದ ನಹಿ ಜ್ಞಾನೇನ ಸದೃಶಂ ಕಿರು ಹೊತ್ತಗೆ ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕ ನಾಗರಾಜ್ ಇದ್ದರು. ಶಿಕ್ಷಕರಾದ ಗೀತಾಂಜಲಿ ಪ್ರಾರ್ಥಿಸಿದರು. ಎಂ.ಎಸ್. ಬಿರಾದಾರ್ ಸ್ವಾಗತಿಸಿದರು.