

ದಾವಣಗೆರೆ: ಲಾಕ್‌ಡೌನ್‌ನಿಂದ ಸ್ತಬ್ಧವಾಗಿದ್ದ ವಾಣಿಜ್ಯನಗರಿಯಲ್ಲಿ 50 ದಿನಗಳ ನಂತರ ಬುಧವಾರ ಆರ್ಥಿಕ ಚಟುವಟಿಕೆಗಳು ಆರಂಭವಾದವು. ಬೆಳಗ್ಗೆ 7 ರಿಂದ ರಾತ್ರಿ 7 ರವರೆಗೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದ್ದರಿಂದ ವ್ಯಾಪಾರ, ವಹಿವಾಟುಗಳು ಗರಿಗೆದರಿದವು.
ಇಷ್ಟು ದಿನ ಬಿಕೋ ಎನ್ನುತ್ತಿದ್ದ ಬೀದಿಗಳಲ್ಲಿ ಜನಸಂಚಾರ ಕಂಡುಬಂದಿತು. ಮಾರುಕಟ್ಟೆಯಲ್ಲಿ ಗ್ರಾಹಕರ ಚಲನವಲನವಿತ್ತು. ಅಂಗಡಿ, ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ, ಪೂಜೆ ಸಲ್ಲಿಸುವ ಮೂಲಕ ವ್ಯಾಪಾರಸ್ಥರು ದಿನಚರಿ ಆರಂಭಿಸಿದರು. ನಗರದ ರಸ್ತೆಗಳಿಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಜನಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.
ಬಟ್ಟೆ ಅಂಗಡಿಗಳು, ಮೊಬೈಲ್ ಶಾಪ್‌ಗಳು, ಪುಸ್ತಕ, ಸ್ಟೇಷನರಿ ಅಂಗಡಿಗಳು, ಕನ್ನಡಕದ ಅಂಗಡಿಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಗಳು, ಹೋಟೆಲ್‌ಗಳು, ಚಪ್ಪಲಿ ಅಂಗಡಿ, ಹಾರ್ಡ್‌ವೇರ್ ಶಾಪ್‌ಗಳು, ಟೇಲರ್ ಅಂಗಡಿಗಳು, ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು ಹೀಗೆ ಆರ್ಥಿಕ ಚಟುವಟಿಕೆಗಳು ಮತ್ತೆ ಹಳಿಗೆ ಬಂದವು.
ಜಿಲ್ಲಾಡಳಿತ ಹೇಳಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿತ್ತು. ಅದರಂತೆ ಬಹುತೇಕ ಅಂಗಡಿಗಳಲ್ಲಿ ಸ್ಯಾನಿಟೈಸರ್ ಇಡಲಾಗಿತ್ತು. ಗ್ರಾಹಕರಿಗೆ ಮೊದಲು ಸ್ಯಾನಿಟೈಸರ್ ಕೊಟ್ಟು ಒಳಗೆ ಕಳಿಸಲಾಗುತ್ತಿತ್ತು.
ಹಳೇ ದಾವಣಗೆರೆಯ ಮಾರುಕಟ್ಟೆ ಪ್ರದೇಶದಲ್ಲಿ ಅರ್ಧದಷ್ಟು ಅಂಗಡಿಗಳು ತೆರೆದಿರಲಿಲ್ಲ. ಬಂಗಾರದ ಅಂಗಡಿಗಳು ಬಂದ್ ಆಗಿದ್ದವು. ಕೆಲವೆಡೆ ಮಾತ್ರ ಪ್ಲಾಸ್ಟಿಕ್, ಹಾರ್ಡ್‌ವೇರ್, ಪಾತ್ರೆ, ಬಟ್ಟೆ ಅಂಗಡಿಗಳು ತೆರೆದಿದ್ದವು. ಜನಸಂದಣಿ ಸಾಕಷ್ಟು ಕಡಿಮೆ ಇತ್ತು.
ಸತತ ಲಾಕ್‌ಡೌನ್, ಏರುತ್ತಿರುವ ಕರೊನಾ ಪ್ರಕರಣಗಳಿಂದ ಮುಂದೆ ಏನಾಗಲಿದೆ ಎಂಬ ಅನಿಶ್ಚಿತತೆ ವ್ಯಾಪಾರಿಗಳನ್ನು ಕಾಡುತ್ತಿದೆ. ಸರಕುಗಳನ್ನು ತರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇರುವ ವಸ್ತುಗಳು ಒಂದಿಷ್ಟು ಖಾಲಿ ಆದರೆ ಸಾಕು ಎಂಬ ಮನೋಭಾವ ಕಂಡು ಬಂದಿತು.
ಬೆಳಗ್ಗೆ ಜವಳಿ ವರ್ತಕರೂ ಸೇರಿ ಎಲ್ಲ ವ್ಯಾಪಾರಸ್ಥರ ಸಭೆ ಕರೆದು, ಅಗತ್ಯ ಮುಂಜಾಗ್ರತೆ ವಹಿಸುವಂತೆ ಮಾರ್ಗದರ್ಶನ ನೀಡಿದ್ದೇವೆ. ಗ್ರಾಹಕರು ಮತ್ತು ನಮ್ಮ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಬ್ಯಾರಿಕೇಡ್ ಅಳವಡಿಸಿ ಗ್ರಾಹಕರು ವ್ಯವಸ್ಥಿತವಾಗಿ ಒಳಗೆ ಬರುವಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಜವಳಿ ವರ್ತಕರಾದ ಬಿ.ಸಿ.ಉಮಾಪತಿ, ಬಿ.ಸಿ. ಶಿವಕುಮಾರ್.