

ದಾವಣಗೆರೆ : ಚಂದ್ರಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಧಾರ್ಮಿಕ ಶ್ರದ್ಧೆ, ನಂಬಿಕೆ ಇರುವವರು ವಿವಿಧ ಆಚರಣೆಗಳನ್ನು ಪಾಲಿಸಿದರು. ಪದ್ಧತಿಯಂತೆ ಗ್ರಹಣ ಸ್ಪರ್ಶಕ್ಕೆ ಮೊದಲು ಸ್ನಾನ ಮಾಡಿ ಭಗವಂತನ ಧ್ಯಾನ ಮಾಡಿದರು. ಗ್ರಹಣ ಮೋಕ್ಷದ ನಂತರ ಮತ್ತೊಮ್ಮೆ ಸ್ನಾನ ಮಾಡಿದರು. ಗ್ರಹಣ ಕಾಲದಲ್ಲಿ ಮಾಡುವ ಸಾಧನೆ ಶ್ರೇಷ್ಠ ಎಂಬ ಭಾವನೆ ಇದೆ. ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಖಗ್ರಾಸ ಚಂದ್ರಗ್ರಹಣ ನಿಮಿತ್ತ ಗ್ರಹಣಶಾಂತಿ ಹೋಮವನ್ನು ಶ್ರದ್ಧಾ ಭಕ್ತಿಯಿಂದ ಹಮಿಕೊಳ್ಳಲಾಗಿತ್ತು. ವೆಂಕಟೇಶಾಚಾರ್ಯ ಮಣ್ಣೂರ್ ಮತ್ತು ಕೃಷ್ಣಾಚಾರ್ಯ ಮಣ್ಣೂರ್ ಪೌರೋಹಿತ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಬದರೀಶ್ ದೇವಳೆ, ವಿಜಯಕುಮಾರ್, ನೀತಾ ನಾರಾಯಣ ವರ್ಣೇಕರ್, ನಿಖಿಲ್, ನಮ್ರತಾ, ರಂಜಿತಾ, ವಿನಯ್ ಕುಡತಲಕರ್, ಶೋಭಾ, ಜಾಹ್ನವಿ, ಕಾಶೀನಾಥ್, ಸುಶಮೀಂದ್ರ, ಜಿ.ಜೆ. ವಿನೋದ್, ಅಮೋಘ ದೇವಳೆ, ಸುಘೋಷ್, ಪವನ್ ಮನಗೂಳಿ, ಶ್ರೀಶ, ಪೃಥ್ವಿ, ಬಸವರಾಜ್, ವೃಂದಾ, ಅದಿತಿ ಪಾಲ್ಗೊಂಡಿದ್ದರು. ಸೋಮವಾರ ಬೆಳಗ್ಗೆ ನಗರ ದೇವತೆ ದುರ್ಗಾಂಬಿಕಾ, ಲಿಂಗೇಶ್ವರ ಇನ್ನಿತರ ದೇವಸ್ಥಾನಗಳಿಗೆ ತೆರಳಿದ ಭಕ್ತರು ದರ್ಶನ ಪಡೆದರು. ಗ್ರಹಣ ದೋಷ ಪರಿಹಾರಕ್ಕಾಗಿ ಧಾನ್ಯ, ವಸ್ತ್ರ ಇನ್ನಿತರ ಪದಾರ್ಥಗಳನ್ನು ಸಲ್ಲಿಸಿದರು. ಗ್ರಹಣ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದಲೇ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ನಭೋ ಮಂಡಲದಲ್ಲಿ ಸಂಭವಿಸಿದ ಅಪರೂಪದ ಚಂದ್ರ ಗ್ರಹಣವನ್ನು ಸಾರ್ವಜನಿಕರು ವೀಕ್ಷಿಸಿದರು. ಗ್ರಹಣ ವೀಕ್ಷಣೆಗೆ ಹೈಸ್ಕೂಲ್ ಮೈದಾನದಲ್ಲಿ ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯಿಂದ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿತ್ತು. ಹಲವಾರು ವಿದ್ಯಾರ್ಥಿಗಳು, ಆಸಕ್ತರು ಆಗಮಿಸಿ ನಿಸರ್ಗದ ಕೌತುಕವನ್ನು ಕಂಡು ಕಣ್ತುಂಬಿಕೊಂಡರು.