ದಲಿತರ ಮೇಲೆ ನಿರಂತರ ಶೋಷಣೆ

dvg-dss_20250325225715618.jpg
Published on

ದಾವಣಗೆರೆ :  ಧರ್ಮ, ದೇವರು ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಿರಂತರವಾಗಿ ದಲಿತರ ಶೋಷಣೆ ನಡೆಯುತ್ತಿದೆ. ಇಂದಿನ ವಾಸ್ತವ ಸ್ಥಿತಿ ಯುವ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯಾಧ್ಯಕ್ಷ ಎ.ಬಿ. ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.  ಶಿಕ್ಷಣವು ನಮ್ಮ ಅರಿವಿನ ಸಾಧನ. ಆದರೆ ಸನಾತನ ವ್ಯವಸ್ಥೆಯು ನಮ್ಮ ಶೋಷಣೆಗಾಗಿ ಶಿಕ್ಷಣವನ್ನೇ ಸಾಧನವನ್ನಾಗಿ ಮಾಡಿಕೊಂಡಿತ್ತು. ಅಕ್ಷರವು ಮೇಲ್ಜಾತಿಯವರಿಗೆ ಮಾತ್ರ ಸೀಮಿತವಾಗಿತ್ತು. ಆಧುನಿಕ ಕಾಲದಲ್ಲೂ ದಲಿತರನ್ನು ಅವಕಾಶಗಳಿಂದ ವಂಚಿಸುವ ಮಾರ್ಗಗಳನ್ನು ಪ್ರಭುತ್ವ ರೂಪಿಸಿದೆ. ದಲಿತರ ಏಳಿಗೆಯನ್ನು ಇಂದಿಗೂ ಸಹಿಸಲಾಗುತ್ತಿಲ್ಲ ಎಂದು ಹೇಳಿದರು.  ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಮಾತನಾಡಿ, ದಲಿತ ಸಂಘಟನೆಗಳು ಶಿಕ್ಷಣವನ್ನು ಬಿಟ್ಟು ಕೇವಲ ಸಂಘಟನೆ ಮತ್ತು ಹೋರಾಟದತ್ತ ಗಮನ ಹರಿಸುತ್ತಿವೆ. ಶಿಕ್ಷಣವಿಲ್ಲದೇ ಸಂಘಟನೆ ಮತ್ತು ಹೋರಾಟ ಕಷ್ಟ ಎಂದು ಎಚ್ಚರಿಸಿದರು.  ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಡಿ.ಎಸ್.ಎಸ್. ಜಿಲ್ಲಾ ಪ್ರಧಾನ ಸಂಚಾಲಕ ಬಿ.ದುಗ್ಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಎಂ.ಜಿ. ಸತೀಶ್ ಕುಮಾರ್, ಖಜಾಂಚಿ ಹನುಮಂತಪ್ಪ ಇದ್ದರು.  ಎ.ಡಿ. ತ್ಯಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಪ್ಳ ಮಂಜುನಾಥ್ ಸ್ವಾಗತಿಸಿದರು, ಕುರುವ ಮಂಜುನಾಥ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net