

ದಾವಣಗೆರೆ : ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿಯ ಅನುದಾನ ಬಳಕೆ ಮಾಡಿರುವುದು ದಲಿತ ಸಮಾಜಕ್ಕೆ ಮಾಡಿರುವ ನಂಬಿಕೆ ದ್ರೋಹ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ಆರೋಪಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ, ಅಹಿಂದ ಉದ್ಧಾರಕ ಎಂದು ಘೋಷಣೆ ಮಾಡಿಕೊಂಡಿರುವ ಸಿದ್ದರಾಮಯ್ಯ ಈಗ ಕೋಮುವಾದಿಯಾಗಿದ್ದಾರೆ. ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನ ಚುನಾವಣೆಯಲ್ಲಿನ ಮತಗಳಿಗಾಗಿ ಬಳಕೆ ಮಾಡಿಕೊಳ್ಳುವ ಚಾಳಿ ತೋರಿದ್ದಾರೆ ಎಂದು ದೂರಿದರು. ರಾಜ್ಯ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಹುಲಿ ಸಂರಕ್ಷಣೆಗೆ ಬಳಕೆ ಮಾಡಿಕೊಂಡಿದೆ. ಹುಲಿಗಳು ದಷ್ಟಪುಷ್ಟವಾಗಿ ಇರಬೇಕು ಎಂದು ದಲಿತ ಸಮುದಾಯಗಳನ್ನು ಬೀದಿಗೆ ಬರುವಂತೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಲಿಗಳ ಮೇಲಿರುವ ಪ್ರೀತಿ ದಲಿತರ ಮೇಲೆ ಇಲ್ಲ ಎಂದು ಹೇಳಿದರು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 2013 ರಿಂದ 2025ರ ವರೆಗೆ 11 ಲಕ್ಷ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಖರ್ಚು ಮಾಡಿರುವುದು ಬರೀ 39 ಸಾವಿರ ಕೋಟಿ ರೂ. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ 2023ರಲ್ಲಿ ಎಸ್‌ಸಿಪಿ, ಟಿಎಸ್‌ಪಿಯಿಂದ 11 ಸಾವಿರ ಕೋಟಿ, 2024ರಲ್ಲಿ 14,282 ಕೋಟಿ ಹಾಗೂ ಮಾ. 7 ರಂದು ಮಂಡಿಸಲಿರುವ ಈ ಬಾರಿಯ ಬಜೆಟ್‌ಗೆ 14,480 ಕೋಟಿ ಅನುದಾನ ಬಳಕೆಗೆ ಮುಂದಾಗಿದೆ. ದಲಿತ ಸಮುದಾಯದ ಅಭಿವೃದ್ಧಿ ಎಂದು ಹೇಳಿಕೊಳ್ಳುವಂತಹ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಕಾರ್ಯುಕ್ರಮ ಜಾರಿಗೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ನೀರಾವರಿ, ಲೋಕೋಪಯೋಗಿ, ಸಾರಿಗೆ ಇತರೆ ಇಲಾಖೆಗಳಿಗೆ ಬಳಕೆ ಮಾಡಿಕೊಂಡಿದೆ. ಅನುದಾನ ಬಳಕೆಯ ಬಗ್ಗೆ ಕೇಳಿದರೆ ದಲಿತ ಸಮುದಾಯಗಳು ಇರುವ ಕಡೆ ಅಭಿವೃದ್ಧಿ ಕಾರ್ಯಕ್ಕೆ ನೀಡಲಾಗಿದೆ ಎಂದು ಉಡಾಫೆ ಉತ್ತರ ಕೊಡುತ್ತಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಚಿವರು, ಶಾಸಕರು ಅನುದಾನದ ಬಳಕೆಯ ಬಗ್ಗೆ ಕೇಳದಂತಾಗಿದ್ದಾರೆ ಎಂದು ದೂರಿದರು. ಈ ಸಾಲಿನ (2025-26) ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆ ಆಧರಿಸಿ ಹೆಚ್ಚಿನ ಅನುದಾನ ನೀಡಬೇಕು. ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯ 7ಬಿ ಮತ್ತು 7ಸಿ ರದ್ದುಪಡಿಸಬೇಕು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಮಂಜುನಾಥ್, ಆರ್.ಯಶವಂತ್, ಪುಲ್ಲಯ್ಯ, ಶಶಿಧರ್, ಹೊನ್ನಯ್ಯ, ನವೀನ್, ಸಂತೋಷ್ ಇದ್ದರು.