

ರಮೇಶ ಜಹಗೀರದಾರ್ ದಾವಣಗೆರೆ ಜನವರಿಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಸಂಬಂಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಒಟ್ಟು 84 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 105 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲ ಬೆಳೆಯುತ್ತಿದ್ದು, ಯುವಜನರು ಅದರ ನಶೆಯ ಸೆಳೆತಕ್ಕೆ ಒಳಗಾಗಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ಹೇಳುತ್ತವೆ. ಈ ಸಾಮಾಜಿಕ ಪಿಡುಗನ್ನು ತಡೆಯಲು ಪೊಲೀಸರು ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಗಾಂಜಾ, ಅಫೀಮು ಸೇವನೆ ಪ್ರಕರಣಗಳು ಒಂದು ಕಡೆಯಾದರೆ, ದುಬಾರಿ ಬೆಲೆಯ ಸಿಂತೆಟಿಕ್ ಡ್ರಗ್‌ಗಳನ್ನು ಬಳಸುವುದೂ ಕಂಡುಬಂದಿದೆ. 84 ಪ್ರಕರಣಗಳಲ್ಲಿ 12 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ 10.366 ಕೆಜಿ ಗಾಂಜಾ, 3.50 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ 65 ಗ್ರಾಂ. ಎಂಡಿಎಂಎ ಮತ್ತು ಅಫೀಮು ವಶಪಡಿಸಿಕೊಳ್ಳಲಾಗಿದೆ. ನಶೆಯ ವರ್ತುಲಕ್ಕೆ ಸಿಲುಕುವವರಲ್ಲಿ ಬಹುತೇಕರು 20 ರಿಂದ 35 ವರ್ಷ ವಯಸ್ಸಿನವರು. ಅವರಲ್ಲಿ ಶೇ. 30 ರಷ್ಟು ವಿದ್ಯಾರ್ಥಿಗಳೇ ಇರುವುದು ಆತಂಕಕಾರಿಯಾಗಿದೆ. ತಪ್ಪು ಕಲ್ಪನೆಗಳಿಂದಾಗಿ ಯುವಜನರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಅದರ ಗುಂಗಿನಿಂದ ಹೊರ ಬರಲಾಗದೆ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರ ಕುಟುಂಬಗಳೂ ನೋವು ಅನುಭವಿಸುತ್ತಿವೆ. ದಾವಣಗೆರೆ ಗ್ರಾಮಾಂತರ ಉಪ ವಿಭಾಗದಲ್ಲಿ ಜನವರಿಯಿಂದ ಜೂನ್ ವರೆಗೆ 14 ಪ್ರಕರಣಗಳು ದಾಖಲಾಗಿವೆ. (ಕಳೆದ 3 ತಿಂಗಳಲ್ಲಿ 11 ಕೇಸ್). ದಾವಣಗೆರೆ ನಗರ ಉಪ ವಿಭಾಗದಲ್ಲಿ ಕಳೆದ 6 ತಿಂಗಳಲ್ಲಿ 45 ಪ್ರಕರಣಗಳಾಗಿವೆ (3 ತಿಂಗಳಲ್ಲಿ 32 ಕೇಸ್). ಚನ್ನಗಿರಿ ಉಪ ವಿಭಾಗದಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ (3 ತಿಂಗಳಲ್ಲಿ 2 ಕೇಸ್). ಸಿಇಎನ್ ಪೊಲೀಸ್ ಠಾಣೆಯಲ್ಲಿ ಜನವರಿಯಿಂದ ಜೂನ್‌ವರೆಗೆ 18 ಪ್ರಕರಣಗಳು ದಾಖಲಾಗಿವೆ (3 ತಿಂಗಳಲ್ಲಿ 15 ಕೇಸ್). ... (ಬಾಕ್ಸ್) ಸಮುದಾಯ ಜಾಗೃತಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಠಾಣಾ ಮಟ್ಟದಲ್ಲಿ ಶಾಲಾ ಕಾಲೇಜು, ಹಾಸ್ಟೆಲ್, ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಅವುಗಳನ್ನು ಮಾರಾಟ ಮಾಡಿದರೆ ಕೈಗೊಳ್ಳುವ ಕಾನೂನು ಕ್ರಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ವತಿಯಿಂದ 82 ಕಾಲೇಜುಗಳಲ್ಲಿ, 92 ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 17920 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾದಕ ವಸ್ತುಗಳ ವ್ಯಸನ, ಅವುಗಳ ಅಕ್ರಮ ಸಾಗಾಣಿಕೆ ವಿರುದ್ಧ ಹೋರಾಟಕ್ಕೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ... ಗಾಂಜಾ ಕೇಸ್‌ಗಳು (ಜನವರಿಯಿಂದ ಜೂನ್ ವರೆಗೆ) * ಸಿಇಎನ್ ಠಾಣೆ: 3 ಕೆಜಿ 49 ಗ್ರಾಂ. ವಶ (2.40 ರೂ. ಮೌಲ್ಯ), 3 ಆರೋಪಿಗಳ ಬಂಧನ * ಆಜಾದ್ ನಗರ: 65 ಗ್ರಾಂ. ಎಂಡಿಎಂಎ ಮತ್ತು ಅಫೀಮು (3.51 ಲಕ್ಷ ರೂ. ಮೌಲ್ಯ), ಒಬ್ಬ ಆರೋಪಿ ಬಂಧನ * ಬಿಳಿಚೋಡು 3 ಕೆಜಿ 65 ಗ್ರಾಂ ವಶ (2.50 ಲಕ್ಷ ರೂ. ಮೌಲ್ಯ), ಒಬ್ಬ ಆರೋಪಿ ಬಂಧನ (ಮನೆ ಬಳಿ ಬೆಳೆದಿರುವುದು) * ಕೆಟಿಜೆ ನಗರ 1250 ಗ್ರಾಂ. ವಶ (1.30 ಲಕ್ಷ ರೂ. ಮೌಲ್ಯ), 3 ಆರೋಪಿತರ ಬಂಧನ ... (ಕೋಟ್) ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಯುವಜನರು ಈ ಜಾಲಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವವರ ವಿರುದ್ಧ ಪೊಲೀಸರ ನಿರಂತರ ಕಾರ್ಯಾಚರಣೆಯಲ್ಲಿ ಸಾರ್ವಜನಿಕರು ಕೈಜೋಡಿಸಬೇಕಾಗಿದೆ. ಪಾಲಕರು ಮಕ್ಕಳ ಮೇಲೆ ನಿಗಾವಹಿಸಬೇಕು. ನೆರೆಹೊರೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವವರು ಕಂಡು ಬಂದರೆ ಸ್ಥಳೀಯ ಪೊಲೀಸರ ಗಮನಕ್ಕೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಮಗ್‌ಶಾಟ್) ...