ವ್ಯಸನಮುಕ್ತ ಸಮಾಜ ನಿರ್ಮಾಣದ ಸಂಕಲ್ಪ

drug.jpg
Published on

ದಾವಣಗೆರೆ : ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶದ ಭದ್ರ ಬುನಾದಿಗೆ ನಾವೆಲ್ಲರೂ ಕಾರಣರಾಗೋಣ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ದೊಡ್ಡಬಾತಿಯ ತಪೋವನದಲ್ಲಿ ಬುಧವಾರ, ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ (ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ), ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಪೋವನ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಆಯೋಜಿಸಿದ್ದ, ಮಾದಕ ವಸ್ತುವಿನ ವ್ಯಸನವನ್ನು ತಡೆಗಟ್ಟುವ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯುವಜನರು, ಅದರಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವರು ಮತ್ತು ಕೊಳಚೆ ಪ್ರದೇಶದ ನಿವಾಸಿಗಳು ಲ್ಲಿ ವಾಸಿಸುತ್ತಿರುವ ಜನರು ಮಾದಕ ವಸ್ತುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯಸನಿಗಳಾಗುತ್ತಿದ್ದಾರೆ, ಇದರಿಂದ ಸಮಾಜದಲ್ಲಿ ಕ್ರೌರ್ಯ ಹೆಚ್ಚಾಗುತ್ತಿದೆ ಎಂದರು.

ಯುವಜನರು ತಂಬಾಕು ಬಳಕೆ ಮಾಡುವುದು ಹೆಮ್ಮೆಯ ವಿಚಾರವೆಂದು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆಯಾಗಿದೆ. ಹಾಸ್ಟೆಲ್ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಕಾಲೇಜು, ಹಾಸ್ಟೆಲ್ ಬಳಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ನೆರೆಯ ಹಲವಾರು ದೇಶಗಳು ಮಾದಕ ವಸ್ತುಗಳನ್ನು ರಫ್ತು ಮಾಡಿ ನಮ್ಮ ದೇಶದ ಯುವಕರನ್ನು ವ್ಯಸನಿಗಳನ್ನಾಗಿ ಮಾಡುತ್ತಿವೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ತೊಂದರೆ, ಕ್ಯಾನ್ಸರ್ ಸೇರಿ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತಪೋವನ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಶಶಿಕುಮಾರ್ ವಿ. ಮೆಹರ್‌ವಾಡೆ ಮಾತನಾಡಿ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿಯಂತ್ರಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶವನ್ನು ರಚಿಸಲಾಗಿದೆ. ನೀತಿ ರೂಪಿಸುವಿಕೆ, ಯೋಜನೆ ತಯಾರಿ ಮತ್ತು ತಂಬಾಕು ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಣೆ, ಮೌಲ್ಯಮಾಪನ ಮಾಡುವುದು ಇದರ ಜವಾಬ್ದಾರಿಯಾಗಿದೆ. ಸಾರ್ವಜನಿಕ ಜಾಗೃತಿ, ಸಮೂಹ ಮಾಧ್ಯಮದ ಮೂಲಕ ಅರಿವು ಅಭಿಯಾನ ಮತ್ತು ಸಾಮಾಜಿಕ ವರ್ತನೆ ಬದಲಾವಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಡಾ. ಗಂಗಾಧರ್ ವರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಪ್ರತಿಜ್ಞಾವಿಧಿ ಬೋಧಿಸಿದರು. ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯೆ ಡಾ.ಕೆ.ಆರ್. ಅಶ್ವಿನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ, ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ್, ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಸಿಬ್ಬಂದಿ, ತಪೋವನ ಸಮೂಹ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net