ಬರ ಪರಿಹಾರದಲ್ಲಿ ರಾಜ್ಯದೊಂದಿಗೆ ಕೇಂದ್ರದ ವೈರತ್ವ

dvg-Ranadeep-sing-surjewala-26_20240427230301426.jpg
Published on

ದಾವಣಗೆರೆ : ಕೇಂದ್ರ ಸರ್ಕಾರ ಬರ ಪರಿಹಾರದ ಪೂರ್ಣ ಹಣ ಬಿಡುಗಡೆ ಮಾಡದೆ ರಾಜ್ಯದೊಂದಿಗೆ ವೈರತ್ವ ಸಾಧಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
 ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರ್ಕಾರ ಕನ್ನಡಿಗರ ವಿರೋಧಿಯಾಗಿದ್ದು ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
 ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಷಾ, ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅವರ ಡಿಎನ್‌ಎನಲ್ಲಿ ಕರ್ನಾಟಕ ವಿರೋಧಿ ಭಾವನೆಯಿದೆ ಎಂದು ಕಿಡಿ ಕಾರಿದರು.
 ರಾಜ್ಯ ಸರ್ಕಾರ 2023ರ ಸೆ. 13 ರಂದು ಬರಪೀಡಿತ ತಾಲೂಕುಗಳ ಘೋಷಣೆ ಮಾಡಿತು. ಅದಾದ ಒಂದು ವಾರದಲ್ಲೆ (ಸೆ. 22) 18,172 ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಯಿತು ಎಂದು ತಿಳಿಸಿದರು.
 ಅ. 4 ರಿಂದ 9ರ ವರೆಗೆ ಕೇಂದ್ರ ಬರ ಅಧ್ಯಯನ ತಂಡ ರಾಜ್ಯ ಪ್ರವಾಸ ಮಾಡಿ ವರದಿ ಸಲ್ಲಿಸಿತು. ರಾಜ್ಯದ ಸಚಿವರು ಹಲವು ಬಾರಿ ದೆಹಲಿಗೆ ತೆರಳಿ ಪ್ರಯತ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎರಡು ಬಾರಿ ಹೋಗಿ ಪ್ರಧಾನಿಗೆ ಮನವಿ ಮಾಡಿದರು ಎಂದು ಹೇಳಿದರು.
 ಕೇಂದ್ರ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಫೆ. 7ರಂದು ರಾಜ್ಯದ ಸಚಿವ ಸಂಪುಟದ ಸದಸ್ಯರು ಹಾಗೂ ಶಾಸಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದರು. ಮಾ. 23 ರಂದು ಮೋದಿ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ನ್ಯಾಯಾಲಯದ ಮೊರೆ ಹೋಯಿತು.
 ಇಷ್ಟೆಲ್ಲ ಆದ ಬಳಿಕ ಈಗ ಕೇಂದ್ರ ಸರ್ಕಾರ 3454 ರೂ.ಗಳನ್ನು ಮಾತ್ರ ಕರ್ನಾಟಕಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇನ್ನೂ 14,718 ಕೋಟಿ ರೂ. ನೀಡದೆ ವಂಚಿಸಿದೆ ಎಂದು ಆರೋಪಿಸಿದರು.
 ಈ ರೈತ ವಿರೋಧಿ ನಿಲುವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ-ಜೆಡಿಎಸ್‌ನ 28 ಅಭ್ಯರ್ಥಿಗಳು ಬೆಂಬಲಿಸುತ್ತಾರೆಯೆ ಎಂದು ಪ್ರಶ್ನಿಸಿದರು.
 ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಕೆ.ಎಸ್. ಬಸವಂತಪ್ಪ, ದೇವೇಂದ್ರಪ್ಪ, ಶ್ರೀನಿವಾಸ ಶಿವಗಂಗಾ, ಎಂ.ಪಿ. ಲತಾ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಜಲಜಾ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಇದ್ದರು.
 ಸುದ್ದಿಗೋಷ್ಠಿಯಲ್ಲಿ ಖಾಲಿ ಚೊಂಬುಗಳನ್ನು ಇಟ್ಟಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net