

ದಾವಣಗೆರೆ : ಸಮುದ್ರದಲ್ಲಿ ತೇಲುವ ಪ್ಲಾಸ್ಟಿಕ್, ಅದರಿಂದ ಜಲಚರಗಳಿಗೆ ಎದುರಾಗಿರುವ ಕಂಟಕ. ಮಾಲಿನ್ಯದಿಂದ ತತ್ತರಿಸಿರುವ ಭೂಮಿಯನ್ನು ಕೈಯಲ್ಲಿ ಎತ್ತಿ ಹಿಡಿದು ರಕ್ಷಿಸುವ ಭಂಗಿ. ಬೆಟ್ಟ-ಗುಡ್ಡ, ಗಿಡ ಮರಗಳು, ಸ್ವಚ್ಛ ಮನೆಯಂಗಳ. ವಿಜಯವಾಣಿ ವತಿಯಿಂದ, ದಾವಣಗೆರೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಭಾಗ ಹಾಗೂ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಶಿವಯೋಗಾಶ್ರಮದ ಜಗದ್ಗುರು ಶ್ರೀ ಜಯದೇವ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಕಲ್ಪನೆಯಲ್ಲಿ ಅರಳಿದ ಚಿತ್ರಗಳಿವು. ನಿಸರ್ಗವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಪರಿಸರದಲ್ಲಿನ ನೀರು, ಗಾಳಿ, ಮಣ್ಣನ್ನು ಮಲಿನಗೊಳಿಸದೇ ಮುಂದಿನ ಜನಾಂಗಕ್ಕೆ ಉಳಿಸಬೇಕಿದೆ ಎನ್ನುವ ಸಂದೇಶವನ್ನು ಈ ಚಿತ್ರಗಳು ನೀಡಿದವು. ನೀಲಿ ಬಣ್ಣದ ಸಮುದ್ರದೊಳಗೆ ತೇಲುವ ಪ್ಲಾಸ್ಟಿಕ್ ಚೀಲದಲ್ಲಿ ಮೀನೊಂದು ಸಿಕ್ಕಿಹಾಕಿಕೊಂಡಿರುವುದು. ಅದರ ಸುತ್ತಲೂ ಇತರ ಜಲಚರಗಳಿಗೂ ಆಪತ್ತು ಕಾದಿರುವುದನ್ನು ವಿದ್ಯಾರ್ಥಿಯೊಬ್ಬ ಮನೋಜ್ಞವಾಗಿ ಚಿತ್ರಿಸಿದ. ಪ್ಲಾಸ್ಟಿಕ್ ಹೇಗೆ ಪರಿಸರವನ್ನು ಹಾಳು ಮಾಡುತ್ತಿದೆ ಎನ್ನುವುದನ್ನು ಆತ ಸೂಕ್ಷ್ಮವಾಗಿ ಆ ಚಿತ್ರದಲ್ಲಿ ಕಾಣಿಸಿದ್ದ. ಪರಿಸರ ಮಾಲಿನ್ಯದಿಂದ ವಿನಾಶದ ಅಂಚಿಗೆ ಸಾಗುತ್ತಿರುವ ಭೂಮಿಯನ್ನು ಕೈಯಲ್ಲಿ ಎತ್ತಿ ಹಿಡಿದು, ಅದನ್ನು ರಕ್ಷಿಸುವ ಅಗತ್ಯವನ್ನು ಸಾರುವ ಮತ್ತೊಂದು ಚಿತ್ರ ಗಮನ ಸೆಳೆಯಿತು. ಬಹಳಷ್ಟು ಚಿತ್ರಗಳು ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿಯ ಚಿತ್ರಣವನ್ನೇ ಕಟ್ಟಿಕೊಟ್ಟವು. ಕೈಗಾರಿಕೀಕರಣದಿಂದ ಆಗುತ್ತಿರುವ ವಾಯು ಮಾಲಿನ್ಯದ ಬಗ್ಗೆಯೂ ವಿದ್ಯಾರ್ಥಿಗಳು ಚಿತ್ರಗಳನ್ನು ರಚಿಸಿದ್ದರು. ಪ್ರೌಢಶಾಲೆಗಳು, ಪಿಯುಸಿ ಮತ್ತು ಪ್ರಥಮ ದರ್ಜೆ ಕಾಲೇಜುಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಪೆನ್ಸಿಲ್, ರಬ್ಬರ್, ಕ್ರಯಾನ್ಸ್, ಆಯಿಲ್ ಪೇಸ್ಟಲ್ಸ್, ಸ್ಕೆಚ್ ಪೆನ್, ಬ್ರಶ್ ಇನ್ನಿತರ ಸಾಮಗ್ರಿಗಳನ್ನು ತಂದಿದ್ದರು. ಕೆಲವರ ಬಳಿ ಕಲರ್ ಕಿಟ್ ಇತ್ತು. ಆಯಾ ಶಾಲೆ, ಕಾಲೇಜುಗಳ ಶಿಕ್ಷಕರು, ಪಾಲಕರೂ ವಿದ್ಯಾರ್ಥಿಗಳ ಜತೆಗೆ ಬಂದಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಾಂತಯ್ಯ ಪರಡಿಮಠ ಮುಖ್ಯ ಅತಿಥಿಯಾಗಿದ್ದರು. ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ.ಎಚ್.ಆರ್. ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು. ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು. ಹಿರಿಯ ವರದಿಗಾರ ಡಿ.ಎಂ. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಉಪ ಸಂಪಾದಕ ಹರ್ಷ ಪುರೋಹಿತ್, ಜಾಹೀರಾತು ವಿಭಾಗದ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ, ಸೀನಿಯರ್ ಆಫೀಸರ್ ಸಿ.ಬಿ. ಶಶಿಧರಮೂರ್ತಿ ಇದ್ದರು. ಉಪ ಸಂಪಾದಕಿ ಶೋಭಾ ಪ್ರಾರ್ಥಿಸಿದರು. ...