

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ವಿಶ್ವೇಶ್ವರಯ್ಯ ಪಾರ್ಕ್‌ನಲ್ಲಿ ಬುಧವಾರ ವಿವಿಧ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಂದ ಚಿತ್ರ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಬಿಡಿಸಿದ ಚಿತ್ರಗಳಲ್ಲಿ ‘ನಾವೆಲ್ಲ ಒಂದೇ ಮತ’, ಸದೃಢ ಭಾರತಕ್ಕೆ ಕಡ್ಡಾಯ ಮತ, ನಿಮ್ಮ ಒಂದು ಮತ ದೇಶದ ಅಭಿವೃದ್ಧಿಗೆ ಪಥ, ನನ್ನ ಮತ ಮಾರಾಟಕ್ಕಿಲ್ಲ ಮತದಾನ ನನ್ನ ಹಕ್ಕು, ಭ್ರಷ್ಟ ಅಭ್ಯರ್ಥಿಗಳನ್ನು ಸೋಲಿಸಲು ನಿಮ್ಮ ಮತ ಕಡ್ಡಾಯ, ಧನ ಕನಕಗಳಿಗಿಂತ ಶ್ರೇಷ್ಠ ನಿಮ್ಮ ಮತ, ದೇಶಾಭಿವೃದ್ಧಿಗೆ ಮತದಾನ ಮಾಡಿ ಹೀಗೆ ಹಲವಾರು ಘೋಷವಾಕ್ಯಗಳು ಚಿತ್ರಕಲೆಯಲ್ಲಿ ಮೂಡಿ ಮತದಾನ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಉಪ ನಿರ್ದೇಶಕಿ ಶಾರದ ದೊಡ್ಡಗೌಡರು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಜಿ. ಕೊಟ್ರೇಶ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಶಿಕ್ಷಕರು ಮತ್ತು ವಿವಿಧ ಶಾಲೆಯ ಮಕ್ಕಳು ಇದ್ದರು.