

ದಾವಣಗೆರೆ : ಬೆಂಗಳೂರಿನಲ್ಲಿ ಸೋಮವಾರ ನಿಧನರಾದ ಹಿರಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಿರ್ದೇಶಕರಾಗಿ ಅಡಿಪಾಯ ಹಾಕಿದರು. ಸ್ವತಃ ನಟ, ನಿರ್ದೇಶಕ, ರಂಗಕರ್ಮಿಯಾಗಿ ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಅನುಭವ ಪಡೆದಿದ್ದ ಸರದೇಶಪಾಂಡೆ, ದಾವಣಗೆರೆ ರಂಗಾಯಣದ ಬಗ್ಗೆ ತಮ್ಮದೇ ಆದ ಪರಿಕಲ್ಪನೆಯನ್ನು ಹೊಂದಿದ್ದರು. ಅವರು ಇಲ್ಲಿನ ರಂಗಾಯಣದ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದು 2020 ರ ಸೆಪ್ಟೆಂಬರ್‌ನಲ್ಲಿ. ಅದು ಕೋವಿಡ್ ಆತಂಕದ ಕಾಲ. ಅಂಥದರಲ್ಲಿ ರಂಗಾಯಣವನ್ನು ಶೂನ್ಯದಿಂದ ಕಟ್ಟುವ ಸವಾಲು ಅವರ ಮುಂದಿತ್ತು. ನಿರ್ದೇಶಕರಾಗಿ ಎರಡೂವರೆ ವರ್ಷಗಳ ಅವಧಿಯಲ್ಲಿ ಕಾಯಕಲ್ಪ ನೀಡಲು ಪ್ರಯತ್ನಿಸಿದರು. ಯಶವಂತ ಸರದೇಶಪಾಂಡೆ ಅವರು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಸ್ಥಳೀಯ ರಂಗಾಸಕ್ತರು ಸ್ಮರಿಸಿಕೊಂಡಿದ್ದು ಅವರ ಅಗಲಿಕೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಯಶವಂತ ಸರದೇಶಪಾಂಡೆ ಪ್ರತಿಭಾಶಾಲಿ ಮತ್ತು ರಂಗಭೂಮಿಯಲ್ಲಿ ಅನುಭವಿಯಾಗಿದ್ದರು. ‘ಆಲ್ ದಿ ಬೆಸ್ಟ್’, ‘ರಾಶಿಚಕ್ರ’ ಇನ್ನಿತರ ಹಾಸ್ಯ ನಾಟಕಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ನಾಟಕದ ಪ್ರಯೋಗವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಮಾಡುವುದು ಅವರಿಗೆ ಗೊತ್ತಿತ್ತು ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರತಿಕ್ರಿಯಿಸಿದರು. ಕಲಾವಿದರು ಆಧುನಿಕತೆಗೆ ಒಗ್ಗಿಕೊಳ್ಳಬೇಕು. ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಪ್ರೇಕ್ಷಕರನ್ನು ತಲುಪಬೇಕು ಎಂಬ ತುಡಿತದೊಂದಿಗೆ ಪ್ರಯೋಗಗಳನ್ನು ಮಾಡುತ್ತಿದ್ದರು ಎಂದು, ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದರು.