ಗ್ರಾಮೀಣ ನಾಟಕ ತಂಡಗಳ ಸಮೀಕ್ಷೆ

dvg-kurukshetra-drama-.jpg
Published on

ರಮೇಶ ಜಹಗೀರದಾರ್ ದಾವಣಗೆರೆ  : ವೃತ್ತಿ ರಂಗಭೂಮಿಯ ಹಳೆಯ ವೈಭವ ಈಗಿಲ್ಲ, ಆದರೆ ಆ ಕಲೆ ಜನಮಾನಸದಲ್ಲಿ ಇಂದಿಗೂ ಜೀವಂತವಾಗಿದೆ. ಹಳ್ಳಿ ಹಳ್ಳಿಯಲ್ಲೂ ನಾಟಕ ತಂಡಗಳಿವೆ. ಅವುಗಳ ಸಮೀಕ್ಷೆ ನಡೆಸಿ, ಶಾಸ್ತ್ರೀಯವಾಗಿ ದಾಖಲೀಕರಣ ಮಾಡಲು ವೃತ್ತಿ ರಂಗಭೂಮಿ ರಂಗಾಯಣ ಯೋಜನೆ ರೂಪಿಸುತ್ತಿದೆ.  ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು ಸೇರಿ 10 ಜಿಲ್ಲೆಗಳಲ್ಲಿ ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಲು ಚಿಂತನೆ ನಡೆದಿದೆ. ಜುಲೈ ತಿಂಗಳಲ್ಲಿ ಸಮೀಕ್ಷೆಗೆ ಚಾಲನೆ ನೀಡಲು ವೃತ್ತಿ ರಂಗಭೂಮಿ ರಂಗಾಯಣ ಸಿದ್ಧತೆ ಮಾಡಿಕೊಳ್ಳುತ್ತಿದೆ.  ರಾಜ್ಯದಲ್ಲಿ ಪ್ರಸ್ತುತ 26 ವೃತ್ತಿ ನಾಟಕ ಕಂಪನಿಗಳಿವೆ. ಅವುಗಳ ಇತಿಹಾಸ, ಚಟುವಟಿಕೆಗಳ ಬಗ್ಗೆ ತಿಳಿಯುವುದು ಸುಲಭ. ಆದರೆ ಒಂದೊಂದು ಗ್ರಾಮದಲ್ಲೂ ಇರುವ ನಾಟಕ ತಂಡಗಳಿಗೆ ಕಂಪನಿಯ ಚೌಕಟ್ಟಿಲ್ಲ. ಜಾತ್ರೆ, ಊರಮ್ಮನ ಹಬ್ಬ, ಉತ್ಸವದಂಥ ಸಂದರ್ಭಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವುದು ವಾಡಿಕೆ.  ಸ್ಥಳೀಯರ ಜತೆಗೆ ಹೊರಗಿನಿಂದ ಕಲಾವಿದರನ್ನು ಕರೆಸಿ ಖುಷಿ, ಸಂಭ್ರಮದಿಂದ ಊರಿನಲ್ಲಿ ರಂಗ ಪ್ರದರ್ಶನ ಮಾಡುತ್ತಾರೆ. ಅವರಲ್ಲಿ ನಟರು, ಹಾರ್ಮೋನಿಯಂ, ತಬಲಾ ನುಡಿಸುವವರು, ನೇಪಥ್ಯ ಕಲಾವಿದರೂ ಇದ್ದಾರೆ.  ಅವರಿಗೆ ಯಾವುದೇ ತರಬೇತಿ ಇರುವುದಿಲ್ಲ, ಹಿರಿಯರಿಂದ ಬಂದ ಬಳುವಳಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಅಭಿಜಾತ ಕಲಾವಿದರೂ ಎನ್ನಬಹುದು. ತಾವು ಕಲಿತಿದ್ದನ್ನು ಯಥಾವತ್ತಾಗಿ ಪ್ರದರ್ಶಿಸಿ ಆನಂದಿಸುತ್ತಾರೆ, ಆಸಕ್ತಿಯಿಂದ ಕಲೆಯಲ್ಲಿ ತೊಡಗಿಕೊಳ್ಳುತ್ತಾರೆ.  ಇಂಥವರನ್ನು ಗುರುತಿಸುವ ಪ್ರಯತ್ನಕ್ಕೆ ವೃತ್ತಿ ರಂಗಭೂಮಿ ರಂಗಾಯಣ ಕೈಹಾಕಿದೆ. ವಿಶೇಷವಾಗಿ ಪೌರಾಣಿಕ ಮತ್ತು ಐತಿಹಾಸಿಕ ನಾಟಕ ಆಡುವ ತಂಡಗಳ ಸಮೀಕ್ಷೆ ಇದಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ ಒಬ್ಬರು ಸಂಶೋಧನಾ ಸಹಾಯಕರನ್ನು ನೇಮಕ ಮಾಡಲು ಚಿಂತನೆ ನಡೆದಿದೆ. ಅವರು ತಮ್ಮ ಭಾಗದಲ್ಲಿರುವ ನಾಟಕ ತಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲೀಕರಣ ಮಾಡಲಿದ್ದಾರೆ.  ಊರು, ಹೋಬಳಿ, ಕಲಾವಿದರ ಹೆಸರು, ವಯಸ್ಸು, ಜಾತಿ, ಕಲಾ ಪ್ರಕಾರ, ನಿರ್ವಹಿಸುವ ಪಾತ್ರ, ಅವರಿಗೆ ಮಾಸಾಶನ ಸಿಗುತ್ತಿದೆಯೆ ಎಂಬುದು ಸೇರಿ 20-30 ಅಂಶಗಳನ್ನು ಗೂಗಲ್ ಅಪ್ಲಿಕೇಶನ್ ಮೂಲಕ ನಮೂದಿಸಲಾಗುವುದು. 10 ಜಿಲ್ಲೆಗಳಿಗೆ ಒಬ್ಬರು ಸಂಯೋಜಕರು ಇರುತ್ತಾರೆ. ಆ ತಂಡಗಳ ಬಳಿ ನಾಟಕದ ಹಸ್ತಪ್ರತಿಗಳಿದ್ದರೆ ಸಂಗ್ರಹಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net