

ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣದಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ವೃತ್ತಿ ರಂಗೋತ್ಸವಕ್ಕೆ ಸೋಮವಾರ ತೆರೆ ಬಿದ್ದಿತು. ನಾಟಕ ಪ್ರದರ್ಶನ, ವಿಚಾರ ಸಂಕಿರಣ, ರಂಗ ಸಂವಾದ, ರಂಗ ದಾಖಲೆಗಳ ಪ್ರದರ್ಶನ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಂಗಾಸಕ್ತರ ಮನ ಗೆದ್ದ ಉತ್ಸವ ಬೆಣ್ಣೆ ನಗರಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಬಯಲು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗೋತ್ಸವದ ಸಮಾರೋಪ ಭಾಷಣ ಮಾಡಿದ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ವೃತ್ತಿ ರಂಗಭೂಮಿಯ ಗತ ವೈಭವದ ಧ್ಯಾನದಲ್ಲೇ ಮುಳುಗುವ ಬದಲು ಹೊಸ ಕಲಾವಿದರನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು. ಹಳೆಯ ಕಲಾವಿದರು ಶ್ರೇಷ್ಠವಾಗಿ ಅಭಿನಯಿಸುತ್ತಿದ್ದರು. ಅವರ ನಟನೆ ಹಾಗಿತ್ತು ಎಂದು ಅದನ್ನೇ ಹೇಳುವುದು ಬಿಡಬೇಕು. ಹೊಸ ಪೀಳಿಗೆಯವರನ್ನು ಹಿಂದಿನವರಂತೆ ರೂಪಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಜನ ಸಮೂಹದ ಬೆಂಬಲವಿದ್ದರೆ ವೃತ್ತಿ ರಂಗಭೂಮಿ ಉಳಿಯುತ್ತದೆ, ಬೆಳೆಯುತ್ತದೆ. ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ವೃತ್ತಿ ರಂಗಭೂಮಿಯ ಇಂದಿನ ಅಧೋಗತಿಗೆ ಹಲವು ಅಂಶಗಳು ಕಾರಣವಾಗಿವೆ. ಅದು ಸಮಾಜದಲ್ಲಿ ಮಲತಾಯಿ ಧೋರಣೆಗೆ ತುತ್ತಾಗುತ್ತ ಬಂದಿದೆ. ಹವ್ಯಾಸಿ ನಾಟಕಗಳು ಬುದ್ಧಿವಂತರಿಗೆ ಮಾತ್ರ ಎಂದು ಬಿಂಬಿಸಲಾಯಿತು. ವೃತ್ತಿ ನಾಟಕ ಕಲಾವಿದರಿಗೆ ಹೋಲಿಸಿದರೆ ಹವ್ಯಾಸಿ ಕಲಾವಿದರ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದರು. ಕಲಾವಿದರು ಪ್ರಶಸ್ತಿಯ ಹಿಂದೆ ಬೀಳಬಾರದು. ಇಂದಿನ ಪ್ರಶಸ್ತಿಗಳು ಘನತೆ ಕಳೆದುಕೊಂಡಿವೆ. ಪ್ರಶಸ್ತಿ ನೀಡಿದವರ ಕಾಲಿಗೆ ಬೀಳುವ ಪರಿಸ್ಥಿತಿ ಬರಬಾರದು ಎಂದು ಹೇಳಿದರು. ಕಲಾವಿದರಿಗೆ ಪ್ರಶಸ್ತಿ ನೀಡುವುದಿರಲಿ, ನಾಟಕ ಕಂಪನಿಗಳಿಗೆ ಅನುದಾನ ಒದಗಿಸುವ ವಿಚಾರವೇ ಆಗಿರಲಿ, ವೃತ್ತಿ ರಂಗಭೂಮಿ ರಂಗಾಯಣವು ಕಲಾವಿದರ ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡುವಂತಾಗಬೇಕು ಎಂದರು. ಹಿಂದೆ ಕಲಾವಿದರ ಸಮಸ್ಯೆಯನ್ನು ಮುಕ್ತವಾಗಿ ಕೇಳುವ ರಾಜಕಲಾರಣಿಗಳಿದ್ದರು ಎಂದು ಎಂ.ಪಿ. ಪ್ರಕಾಶ್ ಅವರ ಹೆಸರನ್ನು ಪ್ರಸ್ತಾಪಿಸಿ, ಈಗ ಅಂಥವರು ಯಾರೂ ಇಲ್ಲ ಎಂದು ವಿಷಾದಿಸಿದರು. ನಟ ಡಿಂಗ್ರಿ ನರೇಶ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶೇಷಾಧಿಕಾರಿ ರವಿಚಂದ್ರ ಇದ್ದರು. ಹಿರಿಯ ರಂಗಭೂಮಿ ಕಲಾವಿದರಾದ ಎಂ.ಎಸ್. ಕೊಟ್ರೇಶ್ ಮತ್ತು ಪುಷ್ಪಮಾಲಾ ಅಬ್ದುಲ್‌ಸಾಬ್ ಅಣ್ಣಿಗೇರಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಡಾ. ಶೃತಿ ರಾಜ್ ನಿರೂಪಿಸಿದರು. ನಂತರ ತೆಲುಗು ನಾಟಕ ಮಾಯಾಬಜಾರ್ ಪ್ರದರ್ಶಿಸಲಾಯಿತು. ... (ಕೋಟ್) ರಂಗಭೂಮಿಯು ಜೀವಸತ್ವ ಇರುವ ಕಲೆ. ಕಲಾವಿದರಿಗೆ ಆತ್ಮವಿಶ್ವಾಸವಿರುತ್ತದೆ. ನಾವು ಮಣ್ಣಿನ ಸೊಗಡಿನಿಂದ ದೂರವಾಗಬಾರದು. ಸಾಂಸ್ಕೃತಿಕ ಮೌಲ್ಯಗಳಿಂದ ನಾಗರಿಕತೆಯ ಗುಣಮಟ್ಟವನ್ನು ಗುರುತಿಸುತ್ತೇವೆ. ಬುಡಕಟ್ಟು ಜನಾಂಗ ಕಲಾ ಪ್ರಕಾರಗಳನ್ನು ಜತನದಿಂದ ಕಾಯ್ದುಕೊಂಡಿವೆ. ನಮಗಾಗಿ ರಂಗಭೂಮಿಯನ್ನು ಉಳಿಸಬೇಕಿದೆ. ಆಡಳಿತ ನಡೆಸುವವರಿಗೆ ಸಾಂಸ್ಕೃತಿಕ ಆಸಕ್ತಿ ಇದ್ದರೆ ಸಮಾಜಕ್ಕೆ ಒಳಿತಾಗುತ್ತದೆ. ಡಾ.ಬಿ.ಆರ್. ರವಿಕಾಂತೇಗೌಡ, ಪೂರ್ವ ವಲಯ ಐಜಿಪಿ