ಸಾರಥಿಯಿಲ್ಲದೆ ಸೊರಗಿದ ವೃತ್ತಿರಂಗಭೂಮಿ

dvg-rangayana-2.jpg
Published on

ರಮೇಶ ಜಹಗೀರದಾರ್ ದಾವಣಗೆರೆ  ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಒಂದು ಕಾಲಕ್ಕೆ ಹಲವು ನಾಟಕ ಕಂಪನಿಗಳು ಏಕ ಕಾಲದಲ್ಲಿ ಕ್ಯಾಂಪ್ ಮಾಡುತ್ತಿದ್ದವು. ಅಂಥ ಇತಿಹಾಸವಿರುವ ಪ್ರದೇಶದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ನೆಲೆ ಕಂಡುಕೊಳ್ಳಬೇಕಿದೆ. ಹೊಸ ನಿರ್ದೇಶಕರ ಆಗಮನದ ನಿರೀಕ್ಷೆಯಲ್ಲಿ ಚಟುವಟಿಕೆಗಳಿಲ್ಲದೆ ಸಂಸ್ಥೆಯು ಸೊರಗಿದೆ.  ವೃತ್ತಿ ರಂಗಭೂಮಿ ರಂಗಾಯಣಕ್ಕಾಗಿ ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದ ಬಳಿ 2022 ರಲ್ಲಿ 10 ಎಕರೆ ಜಾಗ ಮಂಜೂರಾಯಿತು. ಜತೆಗೆ 1 ಕೋಟಿ ರೂ. ಅನುದಾನವನ್ನು ಒದಗಿಸಲಾಯಿತು. ಅಲ್ಲಿಂದ ಇಲ್ಲಿಯ ವರೆಗೆ ರಂಗಾಯಣಕ್ಕೆ ನಿಗದಿಯಾದ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.  ಮೊದಲ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ಅವಧಿಯಲ್ಲಿ ದಾವಣಗೆರೆ ನಗರದಲ್ಲಿ ನಾಟಕೋತ್ಸವಗಳನ್ನು ಆಯೋಜಿಸಿ ರಂಗಾಯಣದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.  ಅವರ ಅವಧಿ ಮುಕ್ತಾಯವಾಗಿ ಒಂದು ವರ್ಷ ಕಳೆದಿದೆ. ಹೊಸ ನಿರ್ದೇಶಕರನ್ನು ನೇಮಕ ಮಾಡುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ. ಅಕಾಡೆಮಿ ಮಾಜಿ ಅಧ್ಯಕ್ಷರು, ನಾಟಕ ಕಂಪನಿಗಳ ಮಾಲೀಕರು, ಕಲಾವಿದರು, ರಂಗ ಸಂಘಟಕರು ಸೇರಿ ಹಲವು ಆಕಾಂಕ್ಷಿಗಳು ವೃತ್ತಿ ರಂಗಭೂಮಿ ರಂಗಾಯಣದ ಚುಕ್ಕಾಣಿ ಹಿಡಿಯಲು ಉತ್ಸುಕರಾಗಿದ್ದಾರೆ. ಬಹುತೇಕ ಆಗಸ್ಟ್ ಅಂತ್ಯದೊಳಗೆ ನೂತನ ನಿರ್ದೇಶಕರ ‘ರಂಗ ಪ್ರವೇಶ’ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಕೊಂಡಜ್ಜಿಯ ಪರಿಸರದಲ್ಲಿ ಸಂಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸಗಳಾಗಬೇಕಿದೆ. 10 ಎಕರೆ ಜಾಗವಿದೆ. ಅಲ್ಲಿ ಸ್ವಚ್ಛತೆ ಮತ್ತು ಫೆನ್ಸಿಂಗ್ ಮಾಡಲು 56 ಲಕ್ಷ ರೂ.ಗಳ ಪ್ರಸ್ತಾವನೆಯನ್ನು 2022 ರಲ್ಲೇ ಕಳಿಸಲಾಗಿದೆ. ಇದುವರೆಗೂ ಆದೇಶ ಬಂದಿಲ್ಲ. ರಂಗಾಯಣದ ರಂಗಸಜ್ಜಿಕೆ  ಅಲ್ಲಿಂದಲೇ ಸಿದ್ಧವಾಗಬೇಕಿದೆ. ಹೊಸ ನಿರ್ದೇಶಕರು ಬಂದ ಮೇಲೆ ಕಾಯಕಲ್ಪ ಸಿಗಬೇಕಿದೆ.  ರಾಜ್ಯದಲ್ಲಿ 20ಕ್ಕೂ ಹೆಚ್ಚು ನಾಟಕ ಕಂಪನಿಗಳಿವೆ. ವೃತ್ತಿ ರಂಗಭೂಮಿಯತ್ತ ಯುವ ಕಲಾವಿದರನ್ನು ಸೆಳೆಯಬೇಕಿದೆ. ಅವರಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸಬೇಕಾಗಿದೆ.  ಜಿಲ್ಲೆಯ ಹಾಗೂ ರಾಜ್ಯದ ವಿವಿಧೆಡೆ ಇರುವ ಹಿರಿಯ ಕಲಾವಿದರನ್ನು ಕರೆಸಿ ಅವರ ಅನುಭವವನ್ನು ಇಂದಿನ ಪೀಳಿಗೆಗೆ ಧಾರೆಯೆರೆಯಬೇಕು. ವೃತ್ತಿಪರ ತರಬೇತಿ ನೀಡುವ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ.  ಸಿನಿಮಾ ಮತ್ತು ಟಿವಿ ಮಾಧ್ಯಮದ ಭರಾಟೆಯ ನಡುವೆ ವೃತ್ತಿ ರಂಗಭೂಮಿ ನಾಟಕ ಕಂಪನಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಹೊಸ ನಟ, ನಟಿಯರನ್ನು ಪರಿಚಯಿಸಿ ಪ್ರೇಕ್ಷರನ್ನು ಹಿಡಿದಿಡುವ ಪ್ರಯತ್ನ ಆಗಬೇಕಿದೆ. ಈ ನಿಟ್ಟಿನಲ್ಲಿ ರಂಗಾಯಣದಿಂದ ಹೊಸ ಕಲಾವಿದರಿಗೆ ತಾಲೀಮು ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ರಂಗಾಯಣದ ಯೋಜನೆಗಳನ್ನು ರೂಪಿಸಬೇಕು ಎಂಬುದು ರಂಗಾಸಕ್ತರ ಅಪೇಕ್ಷೆಯಾಗಿದೆ.  ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರೇ ರಂಗಾಯಣದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಇಲಾಖೆಯ ಜವಾಬ್ದಾರಿಯ ಜತೆಗೆ ಎರಡನ್ನೂ ನಿಭಾಯಿಸಬೇಕಾಗಿದೆ. ರಂಗಾಯಣಕ್ಕೆ ಪ್ರತ್ಯೇಕವಾಗಿ ಪೂರ್ಣಾವಧಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದರೆ ಸಂಸ್ಥೆಯ ಚಟುವಟಿಕೆಗಳ ಕಡೆ ಗಮನ ಹರಿಸಲು ಸಹಾಯಕವಾಗುತ್ತದೆ ಎನ್ನುತ್ತವೆ ಮೂಲಗಳು.  ರಂಗಾಯಣಕ್ಕೆಂದೇ ಜಿಲ್ಲಾಡಳಿತ ಭವನದಲ್ಲಿ ಕೊಠಡಿಯೊಂದನ್ನು ಮೀಸಲಿಡಲಾಗಿದೆ. ನೂತನ ನಿರ್ದೇಶಕರ ಬರುವಿಕೆಗಾಗಿ ಅದು ಕಾಯುತ್ತಿದೆ.  ...    (ಕೋಟ್)  ವೃತ್ತಿರಂಗಭೂಮಿ ರಂಗಾಯಣಕ್ಕೆ ಸರ್ಕಾರ ಕೂಡಲೇ ನಿರ್ದೇಶಕರನ್ನು ನೇಮಕ ಮಾಡಬೇಕು. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನಾ ವೆಚ್ಚದಲ್ಲಿ 5 ಕೋಟಿ ರೂ.ಗಳನ್ನು ಮೀಸಲಿಡಬೇಕು. ರಾಜ್ಯದ ಇತರ ರಂಗಾಯಣಗಳು ನಗರ ಕೇಂದ್ರಿತವಾಗಿವೆ. ವೃತ್ತಿರಂಗಭೂಮಿ ರಂಗಾಯಣಕ್ಕೆ ಕೊಂಡಜ್ಜಿಯಂಥ ಗ್ರಾಮೀಣ ಪರಿಸರ ಸೂಕ್ತವಾಗಿದೆ. ನನೆಗುದಿಗೆ ಬಿದ್ದಿರುವ ಈ ಯೋಜನೆಗೆ ಇಲಾಖೆಯ ಸಚಿವರು ಆದ್ಯತೆ ನೀಡಲಿ.   ಬಾ.ಮ. ಬಸವರಾಜಯ್ಯ, ರಂಗಕರ್ಮಿ, ದಾವಣಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net