

ದಾವಣಗೆರೆ : ಮಾತಿಗಿಂತ ಕೃತಿ ಮುಖ್ಯ. ಆದರೆ, ಇಂದು ಮಾತುಗಳಿಗೆ ಬರ ಇಲ್ಲ, ಕೃತಿಗೆ ಬರ ಇದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಮಾನವ ಬಂಧುತ್ವ ವೇದಿಕೆಯಿಂದ ನಗರದ ಬಿಐಇಟಿ ಕಾಲೇಜು ಆವರಣದ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬುದ್ಧನ ಬೆಳಕು ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಮೀಜಿಗಳು, ಸಾಹಿತಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಅದ್ಭುತ ಮಾತನಾಡುತ್ತಾರೆ. ಆದರೆ, ಮಾತಿಗೆ ಅನುಗುಣವಾದ ವರ್ತನೆ ಇಲ್ಲ. ನಾವು ಎಷ್ಟು ಒಳ್ಳೆಯ ಮಾತುಗಳನ್ನಾಡುತ್ತೇವೆ ಎಂಬುದಕ್ಕಿಂತ ಆಡಿದ ಮಾತನ್ನು ಬದುಕಿನಲ್ಲಿ ಸಾಕಾರಗೊಳಿಸುವುದು ಮುಖ್ಯ ಎಂದು ತಿಳಿಸಿದರು.
ಏಷ್ಯಾದ ಬೆಳಕು ಎಂದೇ ಕರೆಯಲ್ಪಡುವ ಬುದ್ಧ ತನಗೆ ತಾನೇ ಬೆಳಕಾಗುವ ಜತೆಗೆ ಲೋಕಕ್ಕೆ ಬೆಳಕಾದವರು. ಮಾತುಗಳ ಮೂಲಕ ಮನಸ್ಸನ್ನು ಅರಳಿಸುವ ಮೂಲಕ ಪರಿವರ್ತನೆ ತರುವ ಕೆಲಸ ಮಾಡಿದರು ಎಂದರು.
ಸತೀಶ್ ಜಾರಕಿಹೊಳಿ ಅವರು ಸ್ಮಶಾನದಲ್ಲಿ ಅಪರೂಪದ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಸಾವು, ಬದುಕು ಹಾಗೂ ಆದರ್ಶದ ನೆಲೆಯಲ್ಲಿ ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ದೇಶವನ್ನು ಪ್ರವರ್ಧಮಾನಕ್ಕೆ ತರಲು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರಿಂದ ಮಾತ್ರ ಸಾಧ್ಯ. ಅವರ ಭವಿಷ್ಯದ ಚಿಂತನೆಗಳು ನಮಗೆ ಮಾರ್ಗದರ್ಶಕ ಎಂದು ಹೇಳಿದರು.
ಬುದ್ಧನ ಬೆಳಕು ಹೆಸರೇ ಒಂದು ರೋಚಕ ಮತ್ತು ಆಕರ್ಷಕ. ಸಮಾಜದ ವಿಕ್ಷಿಪ್ತ ಪರಿಸ್ಥಿತಿ ಸಂದರ್ಭದಲ್ಲಿ ನಾಟಕ ಪ್ರದರ್ಶನ ಆಗುತ್ತಿದ್ದು ಬುದ್ಧನ ಬೆಳಕು ನಮ್ಮ ಅಂಧಕಾರ ತೊಡೆದುಹಾಕಲಿ ಎಂದರು.
ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಕಲಾವಿದರನ್ನು ಹುಡುಕಿಕೊಂಡು ಹೋಗುವ ಮೂಲಕ ಒಂದು ಕಲಾ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿರುವುದು ನಿಜಕ್ಕೂ ಶ್ಲಾಘನೀಯ. ಸರ್ಕಾರದ ಹೊರತಾಗಿ ಈ ಕೆಲಸ ನಡೆಯಲಿ ಎಂದು ಆಶಿಸಿದರು.
ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಜಗತ್ತಿನ ಅಸಹನೆ, ಹಿಂಸೆ ಭಯೋತ್ಪಾದನೆ ಸೇರಿ ಎಲ್ಲ ಸಮಸ್ಯೆಗಳಿಗೆ ಬುದ್ಧನ ಸಂದೇಶ ಪರಿಹಾರವಾಗಿದೆ. ಬುದ್ಧನ ಚಿಂತನೆ ಓದುವ ಜತೆಗೆ ಅದರಂತೆ ನಡೆದುಕೊಂಡರೆ ರಾಜಕೀಯ, ಧರ್ಮ ಹಾಗೂ ಜಾತಿಯ ಸಮಸ್ಯೆಗಳು ತಂತಾನೆ ನಿವಾರಣೆ ಆಗುತ್ತವೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಕಲೆ ಎಲ್ಲ ಕಾಲದಲ್ಲೂ ಆರೋಗ್ಯಪೂರ್ಣ ಸಮಾಜ ಕಟ್ಟಲು ನಿರಂತರ ಪ್ರಯತ್ನಿಸುತ್ತಿವೆ. ನಮ್ಮ ಪರಂಪರೆಯೇ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಿದೆ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆಯ ರವಿನಾಯ್ಕರ್ ಪ್ರಾಸ್ತಾವಿಕ ಮಾತನಾಡಿದರು. ರಾಘು ದೊಡ್ಮನಿ ಸ್ವಾಗತಿಸಿದರು.