ಅಭಿನಯ ಚತುರ ಶಿಕ್ಷಕರಿಗಿದೆ ಜಗದ ಮನ್ನಣೆ

SANEHALLI SWAMIJI
Published on

ದಾವಣಗೆರೆ: ಪಠ್ಯ ವಿಷಯದ ಪಾತ್ರಗಳಿಗೆ ತಕ್ಕಂತೆ ಆಂಗಿಕ ಅಭಿನಯ, ಧ್ವನಿಯ ಏರಿಳಿತ ಮೊದಲಾದ ಕಲೆಗಳನ್ನು ರೂಢಿಸಿಕೊಂಡ ಪ್ರತಿಭಾವಂತ ಶಿಕ್ಷಕರು ಮಾತ್ರ ಜನರು ಮತ್ತು ಜಗದ ಮನ್ನಣೆ ಗಳಿಸಬಲ್ಲರು ಎಂದು ಸಾಣೇಹಳ್ಳಿಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಂಥ ಸರಸ್ವತಿ ಪ್ರತಿಭಾರಂಗದಿಂದ ಭಾನುವಾರ ಹಮ್ಮಿಕೊಂಡಿದ್ದ, ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಂದ 8, 9 ಹಾಗೂ 10ನೇ ತರಗತಿಗಳ ಪಠ್ಯಾಧಾರಿತ ಪದ್ಯಗಳ ವಾಚನದ ಕನ್ನಡ ಕವಿ-ಕಾವ್ಯ ದರ್ಶನಂ ಎಂಬ ವಿನೂತನ ವೆಬಿನಾರ್ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು. ತಾವು ಕಲಿತದ್ದನ್ನು ಶಾಲಾಮಕ್ಕಳಿಗೆ ಕಲಿಸುವಾಗ ಮುಖದಲ್ಲಿ ಸಂತಸ, ಉತ್ಸಾಹ, ಆಸಕ್ತಿ ತುಂಬಿಕೊಂಡಿರಬೇಕು. ಅಭಿನಯ ಕಲೆ ಮೈಗೂಡಿಸಿಕೊಂಡು ನವರಸಗಳನ್ನು ವ್ಯಕ್ತಪಡಿಸುವ ಒಬ್ಬ ಶಿಕ್ಷಕ ಅದ್ಭುತ ನಟ, ಪರಿಪೂರ್ಣ ಶಿಕ್ಷಕನಾಗಲು ಸಾಧ್ಯವಿದೆ ಎಂದು ಹೇಳಿದರು.

ಶಿಕ್ಷಕರಾದವರು ಮನಸ್ಸು ಮಾಡಿದರೆ ಉತ್ತಮ ಕಾರ್ಯ ಮಾಡಬಹುದು ಎಂಬುದಕ್ಕೆ ಶಿವಕುಮಾರ ಕುರ್ಕಿ ಅವರ ಈ ಆನ್‌ಲೈನ್ ಕಾರ್ಯಕ್ರಮವೇ ಸಾಕ್ಷಿ. 30ಕ್ಕೂ ಹೆಚ್ಚು ಶಿಕ್ಷಕರನ್ನು ಸಂಘಟಿಸುವ ಮೂಲಕ ಶಿಕ್ಷಣ ಇಲಾಖೆ ಮಾಡಬಹುದಾದ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೀಗೆ ಶಿಕ್ಷಕರು ತರಗತಿಗಳಲ್ಲಿ ಬೋಧನೆಗೆ ಸೀಮಿತರಾಗದೆ ಸಮಾಜದ ಎದುರು ನಿಂತು ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುವಂತಾಗಬೇಕು ಎಂದು ಆಶಿಸಿದರು.

ಹಿರಿಯ ಕವಿ ಅಮೋಘಂ ಚೈತ್ರಕಾರಂಜಿ ಮಾತನಾಡಿ, ಕನ್ನಡ ಅಧ್ಯಾಪಕರು ಕಾವ್ಯವನ್ನು ಓದುವ, ಆಸ್ವಾದಿಸುವ ಬೋಧಿಸುವ ಕಲೆ ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಡಯಟ್ ಪ್ರಾಚಾರ್ಯ ಎಚ್.ಕೆ.ಲಿಂಗರಾಜು ಮಾತನಾಡಿ, ಇಂದಿನ ಮಕ್ಕಳು ತುಂಬಾ ಚುರುಕಾಗಿರುತ್ತಾರೆ. ಇವರಿಗೆ ಕಲಿಸುವ ಶಿಕ್ಷಕರೂ ಸಹ ಇಂತಹ ಹೊಸ ತಂತ್ರಜ್ಞಾನಗಳ ಮುಖೇನ ನಾವೀನ್ಯತೆಯಿಂದ ಕಲಿಸುವ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಅಭಿಮಾನ ಪ್ರೀತಿ ಗೌರವ ಬೆಳೆಯುವಂತೆ ಎಲ್ಲಾ ಕನ್ನಡ ಶಿಕ್ಷಕರೂ ಮುಂಬರುವ ಎಲ್ಲ ಹೊಸ ಬೋಧನಾ ವಿಧಾನಗಳನ್ನು ಸದಾ ಕಲಿತು ಅಳವಡಿಸಿಕೊಳ್ಳಬೇಕು ಎಂದು ಆಶಿಸಿದರು.

ಚನ್ನಗಿರಿ ಬಿಇಒ ಕೆ.ಮಂಜುನಾಥ ಮಾತನಾಡಿದರು. ವಿವಿಧ ಜಿಲ್ಲೆಗಳ 33 ಜನ ಕನ್ನಡ ಶಿಕ್ಷಕರು ತಮಗೆ ನೀಡಿದ ಪಠ್ಯಾಧಾರಿತ ಪದ್ಯಗಳನ್ನು ಕೆಲವರು ಗಮಕ ಶೈಲಿಯಲ್ಲಿ ಸುಶ್ರಾವ್ಯವಾಗಿ ಹಾಡಿದರೆ ಹಲವರು ವಾಚನ ಮಾಡಿದರು. ಸಂಘಟಕ ಆರ್. ಶಿವಕುಮಾರಸ್ವಾಮಿ ಕುರ್ಕಿ ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯ, ಶ್ರವಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net