

ರಮೇಶ ಜಹಗೀರದಾರ್ ದಾವಣಗೆರೆ : ಬೀದಿ ನಾಯಿಗಳ ಹಾವಳಿ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ನಾಯಿ ಕಚ್ಚಿದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 5776 ನಾಯಿ ಕಡಿತ ಪ್ರಕರಣಗಳು ಸಂಭವಿಸಿದ್ದವು. ಈ ವರ್ಷ ಆ. 15 ರ ವರೆಗೆ 6157 ಕೇಸ್‌ಗಳು ದಾಖಲಾಗಿವೆ!. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಇಂಥ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ. ನಗರದ ಶಾಸ್ತ್ರಿ ಲೇಔಟ್ನಲ್ಲಿ ಬೀದಿನಾಯಿ ದಾಳಿಗೆ ಒಳಗಾಗಿದ್ದ 4 ವರ್ಷದ ಬಾಲಕಿ ಖದೀರಾ ಬಾನು ಮೃತಪಟ್ಟ ಪ್ರಕರಣ ಸಮಸ್ಯೆಯ ಗಂಭೀರತೆಗೆ ಕನ್ನಡಿ ಹಿಡಿಯುತ್ತದೆ. ನಾಲ್ಕು ತಿಂಗಳ ಹಿಂದೆ ಆಟವಾಡುವಾಗ ಆ ಬಾಲಕಿಗೆ ನಾಯಿ ಕಚ್ಚಿತ್ತು. ರೇಬಿಸ್ ಕಾಯಿಲೆಗೆ ತುತ್ತಾಗಿದ್ದ ಆ ಮಗುವಿಗೆ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗಲಿಲ್ಲ. ಮಹಾನಗರ ಪಾಲಿಕೆಯ ಮೂಲಗಳ ಪ್ರಕಾರ ನಗರದಲ್ಲಿ 17 ಸಾವಿರ ಬೀದಿ ನಾಯಿಗಳಿವೆ. ಯಾವ ಬಡಾವಣೆಗೆ ಹೋದರೂ ಅವುಗಳ ಹಾವಳಿ ತಪ್ಪಿದ್ದಲ್ಲ. ನಾಯಿ ಕಂಡರೆ ಬೆಚ್ಚಿ ಬೀಳುವ ಸ್ಥಿತಿ ಇದೆ. ರಾತ್ರಿ ಹೊತ್ತಿನಲ್ಲಂತೂ ಅಲ್ಲಲ್ಲಿ ಬೀಡು ಬಿಟ್ಟ ನಾಯಿಗಳ ಹಿಂಡು ಬೆನ್ನು ಹತ್ತುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಕೆಲವರು ಬಿದ್ದು ಗಾಯ ಮಾಡಿಕೊಂಡ ಉದಾಹರಣೆ ಇದೆ. ದ್ವಿಚಕ್ರ ವಾಹನ ಸವಾರರಿಗೂ ನಾಯಿಗಳ ಕಾಟ ತಪ್ಪಿದ್ದಲ್ಲ.