

ದಾವಣಗೆರೆ : ನಗರದ ಹಳೇ ಕುಂದುವಾಡದ ಬೆಂಚಿಕಟ್ಟೆಯಲ್ಲಿ ಶಂಕಿತ ಹುಚ್ಚು ನಾಯಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ‘ಆಪರೇಷನ್ ಡಾಗ್’ ಕಾರ್ಯಾಚರಣೆ ನಡೆಸಿ 16 ಬೀದಿ ನಾಯಿಗಳನ್ನು ಹಿಡಿಯಲಾಯಿತು. ಗ್ರಾಮದ ಬೀದಿ ಬೀದಿಗಳಲ್ಲಿದ್ದ ನಾಯಿಗಳನ್ನು ಹುಡುಕಿದ ತಂಡವು ಬಲೆಗಳ ಸಹಾಯದಿಂದ ಅವುಗಳನ್ನು ಹಿಡಿದು ಶ್ರೀರಾಮನಗರಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಅವುಗಳಿಗೆ ಸಂತಾನ ಹರಣ ಕ್ರಿಯೆ ನಡೆಸಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಸೋಮವಾರ ಸಂಜೆ ಶಂಕಿತ ಹುಚ್ಚು ನಾಯಿಯು ಮಕ್ಕಳ ತಲೆ, ಕೈ ಕಾಲುಗಳಿಗೆ ಕಚ್ಚಿತ್ತು. ತಪ್ಪಿಸಲು ಹೋದವರ ಮೇಲೂ ದಾಳಿ ಮಾಡಿತ್ತು. ಗಾಯಾಳುಗಳಿಗೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.