

ದಾವಣಗೆರೆ : ವಿವಿಧ ಅಪರಾಧ ಪ್ರಕರಣಗಳ ಪತ್ತೆ ಮತ್ತು 225 ಭದ್ರತಾ ಕರ್ತವ್ಯಗಳಲ್ಲಿ ಪೊಲೀಸರಿಗೆ ನೆರವಾಗಿದ್ದ ಜಿಲ್ಲಾ ಪೊಲೀಸ್ ಶ್ವಾನದಳ ವಿಭಾಗದ ಶ್ವಾನ ‘ಸೌಮ್ಯಾ’ ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿತು.
ಶ್ವಾನದ ಕಳೇಬರವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಇಟ್ಟು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಇತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.
ಪ್ರಮುಖ ಕಾರ್ಯಾಚರಣೆ ಮತ್ತು ಭದ್ರತಾ ಕರ್ತವ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಒಡನಾಡಿಯಾಗಿದ್ದ ಪ್ರೀತಿಯ ಶ್ವಾನಕ್ಕೆ ಭಾವುಕ ವಿದಾಯ ಹೇಳಲಾಯಿತು.
ಸದಾ ಕ್ರಿಯಾಶೀಲವಾಗಿದ್ದ ಶ್ವಾನವು ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾಯಿತು. ಆ. 24 ರಂದು ಅದರ ನಾಲಿಗೆ ಬಿಳಿಯಾಗಿರುವುದು ಕಂಡುಬಂದಿತು. ಕೂಡಲೇ ಇಲ್ಲಿನ ಸರ್ಕಾರಿ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ರಕ್ತ ತಪಾಸಣೆ ವೇಳೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದು ಪತ್ತೆಯಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಅದನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೆಚ್ಚಿನ ತಪಾಸಣೆಯ ನಂತರ ಅದು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿತು.
‘ಸೌಮ್ಯಾ’ ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವ ಹೊಂದಿತ್ತು. ನಮ್ಮ ಇಲಾಖೆ, ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ಬರುವಂತೆ ಕೆಲಸ ಮಾಡಿತ್ತು. ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಟ್ಟಿರಲಿಲ್ಲ. ಇಷ್ಟು ಬೇಗನೆ ಅದನ್ನು ಕಳೆದುಕೊಂಡಿದ್ದಕ್ಕೆ ನೋವಾಗಿದೆ ಎಂದು, ಅದರ ಹ್ಯಾಂಡ್ಲರ್ ವಿ.ಆರ್. ರೇವಣಸಿದ್ದಪ್ಪ ಸುದ್ದಿಗಾರರಿಗೆ ತಿಳಿಸಿದರು.
ಲ್ಯಾಬ್ರಡಾರ್ ತಳಿಯ ಈ ಶ್ವಾನ 2018ರ ಜೂನ್ 8ರಂದು ಜನಿಸಿತ್ತು. ತರಬೇತಿಯ ನಂತರ 2019ರ ಮೇ 4ರಿಂದ ದಾವಣಗೆರೆ ಜಿಲ್ಲೆಯಲ್ಲಿ ಸ್ಫೋಟಕ ಪತ್ತೆ ವಿಭಾಗದಲ್ಲಿ ಕರ್ತವ್ಯ ಆರಂಭಿಸಿತು.
ಸ್ಫೋಟಕ ಪತ್ತೆಯ 4 ಪ್ರಕರಣಗಳಲ್ಲಿ ಈ ಶ್ವಾನವು ಹಾಜರಾಗಿ 2 ಪ್ರಕರಣಗಳನ್ನು ಭೇದಿಸಲು ನೆರವಾಯಿತು. ಕಾಡಜ್ಜಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅಕ್ರಮವಾಗಿ ಗೋಡೌನ್‌ನಲ್ಲಿ ಸಂಗ್ರಹಿಸಿದ್ದ ಕಚ್ಚಾ ಸ್ಫೋಟಕವನ್ನು ಪತ್ತೆಹಚ್ಚಿತು. ಕಾಶಿಪುರ ಗ್ರಾಮದ ಜಮೀನಿನಲ್ಲಿ 2021ರ ಮಾರ್ಚ್‌ನಲ್ಲಿ ಜಿಲೆಟಿನ್ ಪತ್ತೆ ಕಾರ್ಯ ಮಾಡಿದ್ದು ಈ ಶ್ವಾನದ ಮತ್ತೊಂದು ಸಾಧನೆಯಾಗಿದೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬೂರು ಗ್ರಾಮದ ಜಮೀನಿನಲ್ಲಿ ಅನುಮಾನಾಸ್ಪದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿತ್ತು.
ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕಾರ್ಯಕ್ರಮಗಳಿದ್ದಾಗ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಿತ್ತು.
ಭಾರತ್ ಜೋಡೋ ಯಾತ್ರೆ, ಬೆಂಗಳೂರು ಮತ್ತು ಹಂಪಿಯಲ್ಲಿ ನಡೆದ ಜಿ-20 ಶೃಂಗ ಸಭೆಗಳು, ದಸರಾ ಉತ್ಸವ, ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ, ಬಾಬರಿ ಮಸೀದಿ ವಿವಾದದ ತೀರ್ಪು ಪ್ರಕಟವಾದ ಸಂದರ್ಭದ ಕರ್ತವ್ಯ, ಹರಜಾತ್ರೆ ಮತ್ತು ಹರಿಹರದ ಮೇರಿ ಜಾತ್ರೆ, ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆದಾಗ ಭದ್ರತಾ ಕರ್ತವ್ಯ, ಗ್ರಾಮ ಪಂಚಾಯಿತಿ ಚುನಾವಣೆಯಿಂದ ಲೋಕಸಭಾ ಚುನಾವಣೆ ವರೆಗೆ ತಪಾಸಣಾ ಕಾರ್ಯ ನಿರ್ವಹಿಸಿದೆ.
ಪ್ರತಿ ದಿನ ನ್ಯಾಯಾಲಯ, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ತಪಾಸಣೆ, ಗಣರಾಜ್ಯೋತ್ಸವ, ಸ್ವಾತಂತ್ರೊೃೀತ್ಸವ, ರಂಜಾನ್ ಆಚರಣೆ ಮುಂತಾದ ಸಂದರ್ಭಗಳಲ್ಲಿ ‘ಸೌಮ್ಯಾ’ ಕರ್ತವ್ಯ ನಿರ್ವಹಿಸಿದೆ.
...
(ಕೋಟ್)
ಶ್ವಾನವು 224ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿತ್ತು. ಒಳ್ಳೆಯ ಒಡನಾಟದೊಂದಿಗೆ ಚಟುವಟಿಕೆಯಿಂದ ಕೂಡಿತ್ತು. 2 ವಾರಗಳಿಂದ ಅನಾರೋಗ್ಯ ಪೀಡಿತವಾಗಿತ್ತು. ಮೃತ ಶ್ವಾನದ ಸಮಾಧಿ ನಿರ್ಮಿಸುವ ಕುರಿತು ಪರಿಶಿಲನೆ ನಡೆಸಲಾಗುವುದು.
ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ