243 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ss.jpg
Published on

ದಾವಣಗೆರೆ : ನಗರದ ರಾಮಕೃಷ್ಣ ಹೆಗಡೆ ನಗರದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ 243 ಫಲಾನುಭವಿಗಳಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಶನಿವಾರ ಹಕ್ಕುಪತ್ರ ವಿತರಿಸಿದರು.
 ಈ ಸಂದರ್ಭದಲ್ಲಿ ಅವರು ಮಾತನಾಡಿ, ಹೆಗಡೆ ನಗರದಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಿದ್ದ 243 ಅರ್ಹ ಫಲಾನುಭವಿಗಳನ್ನು ಗುರುತಿಸಿ ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಲಾಗುತ್ತಿದೆ. ಈ ಫಲಾನುಭವಿಗಳಿಗೆ ದೊಡ್ಡಬಾತಿಯಲ್ಲಿರುವ 11.34 ಗುಂಟೆ ಜಾಗವನ್ನು ನಿವೇಶನಕ್ಕೆ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ, ನೀರು, ವಿದ್ಯುತ್ ಇನ್ನಿತರ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.
 ಹಕ್ಕುಪತ್ರ ಪಡೆದವರು ಯಾರಿಗೂ ಮಾರಾಟ ಮಾಡಕೂಡದು. ಸರ್ಕಾರಿ ಆದೇಶದಲ್ಲಿ ನಮೂದಿಸಿರುವ ಅಂಶಗಳಿಗೆ ವಿರುದ್ಧವಾಗಿ ತಪ್ಪು ಮಾಹಿತಿ ನೀಡಿ ಮಂಜೂರಾತಿ ಪಡೆದಲ್ಲಿ ಕರ್ನಾಟಕ ಭೂ ಮಂಜೂರಾತಿ ಕಾಯ್ದೆ ಪ್ರಕಾರ ರದ್ದುಪಡಿಸಿ ನಿವೇಶನವನ್ನು ವಾಪಸ್ ಪಡೆಯಲಾಗುವುದು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
 ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ ಹಾಗೂ ಪಾಲಿಕೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net