ಮಹಿಳಾ ಸಶಕ್ತೀಕರಣದಿಂದ ಸಮಾಜ ಪರಿಪೂರ್ಣ

dvg-doctors.jpg
Published on

ದಾವಣಗೆರೆ : ಮಹಿಳೆಯರನ್ನು ಸಶಕ್ತೀಕರಣ ಗೊಳಿಸದೇ ಈ ಸಮಾಜ ಪರಿಪೂರ್ಣವಾಗುವುದಿಲ್ಲ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್-ರಾಜ್ಯ ಶಾಖೆ ಅಧ್ಯಕ್ಷ ಡಾ.ವೀರಭದ್ರಪ್ಪ ವಿ. ಚಿನಿವಾಲರ್ ಹೇಳಿದರು.  ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಘಟಕದ ಮಹಿಳಾ ವೈದ್ಯರ ವಿಭಾಗದ ಸಹಯೋಗದೊಂದಿಗೆ ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಐಎಂಎ ಭವನದಲ್ಲಿ ಭಾನುವಾರ, ರಾಜ್ಯ ಮಟ್ಟದ 7ನೇ ಮಹಿಳಾ ವೈದ್ಯರ ಸಮ್ಮೇಳನ ‘ಪ್ರಗತಿ-2025’ ಉದ್ಘಾಟಿಸಿ ಮಾತನಾಡಿದರು.  ಹಲವಾರು ವರ್ಷಗಳಿಂದ ಲಿಂಗ ಸಮಾನತೆಯ ಕೂಗು ಕೇಳುತ್ತಲೇ ಇದೆ. ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣ ಲಿಂಗ ಸಮಾನತೆ ಬಗ್ಗೆ ಧ್ವನಿ ಎತ್ತಿದ್ದರು ಎಂದು ತಿಳಿಸಿದರು.  ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾಳೆ. ಸಾಹಿತ್ಯ, ಶಿಕ್ಷಣ, ರಾಜಕೀಯ, ವೈದ್ಯಕೀಯ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ಆದಾಗ್ಯೂ ಸ್ತ್ರೀ ಸಮಾನತೆ ಹೋರಾಟ ನಡೆಯುತ್ತಲೇ ಇದೆ. ಆದಷ್ಟು ಶೀಘ್ರ ಹೋರಾಟಕ್ಕೆ ಫಲ ದೊರೆಯಲಿ ಎಂದು ಆಶಿಸಿದರು.  ಹದಿನಾಲ್ಕನೇ ವಯಸ್ಸಿನಲ್ಲಿ ಬಾಲ್ಯವಿವಾಹಕ್ಕೆ ಬಲಿಯಾದ ಆನಂದಿಬಾಯಿ ಜೋಶಿ ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ಪದವಿ ಪಡೆದ ಮೊದಲ ಭಾರತೀಯ ಮಹಿಳೆ. ಇವರು ಎಲ್ಲ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.  ಡಾ. ಆನಂದಿಬಾಯಿ ಅವರ ವೈದ್ಯಕೀಯ ಕ್ಷೇತ್ರದ ಉಜ್ವಲ ಪ್ರಯಾಣವು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಕನಸಿನ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಅಸಂಖ್ಯಾತ ಮಹಿಳೆಯರಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.  ಐಎಂಎ ಜಿಲ್ಲಾಧ್ಯಕ್ಷ ಡಾ.ಬಿ.ಎಂ. ಹರ್ಷ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ. ಆರ್.ಎನ್. ಮಾಳೇಗೌಡ, ಡಾ.ಹರೀಶ್, ಡಾ.ಕೆ.ಎನ್. ಮಧುಸೂದನ, ಡಾ.ವಾಣಿ, ಡಾ.ಶ್ವೇತಾ, ಡಾ.ಚೈತಾಲಿ, ಡಾ. ಛಾಯಾ, ಡಾ.ರೇಖಾ, ಡಾ.ಶೋಭಾ ಧನಂಜಯ್, ಡಾ.ಸೀಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net