ಡಿಜೆ ನಿಷೇಧ ಹಿಂಪಡೆಯುವುದು ಬೇಡ

dvg-manavi_20250828235428168.jpg
Published on

ದಾವಣಗೆರೆ : ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಗಳಿಗೆ ಜಿಲ್ಲಾಡಳಿತ ಡಿಜೆಯನ್ನು ನಿಷೇಧಿಸಿರುವುದು ಉತ್ತಮ ಕ್ರಮವಾಗಿದೆ. ಒತ್ತಡಗಳಿಗೆ ಮಣಿದು ಆದೇಶವನ್ನು ಹಿಂಪಡೆಯಬಾರದು ಎಂದು ಪರಿಸರ ಸಂರಕ್ಷಣಾ ವೇದಿಕೆ, ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಇನ್ನಿತರ ಸಂಘಟನೆಗಳು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಮಾಡಿವೆ.  ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಡಿಸಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ದೇವರಮನೆ ಮಾತನಾಡಿ, ಗಣೇಶ ಹಬ್ಬವು ಸಾಂಸ್ಕೃತಿಕ ಹಾಗೂ ಭಕ್ತಿ ಪೂರ್ವಕ ಆಚರಣೆಯಾಗಿದೆ. ಡಿ.ಜೆ.ಯಿಂದ ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿ ಕಡೆಗೆ ವಾಲುತ್ತಿದೆ ಎಂದು ತಿಳಿಸಿದರು.  ಡಿ.ಜೆ ಶಬ್ದ ಮಾಲಿನ್ಯದಿಂದ ವಯೋವೃದ್ಧರು, ಮಕ್ಕಳು, ಪ್ರಾಣಿ, ಪಕ್ಷಿಗಳು ಹಾಗೂ ಹೃದಯ ಸಂಬಂಧಿ ಇನ್ನಿತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ತೊಂದರೆಯಾಗುತ್ತದೆ. ಡಿ.ಜೆ ಬಳಕೆ ಹಿಂದು ಸಂಪ್ರದಾಯದ ಭಾಗವಲ್ಲ. ಆದರೆ ಇದರ ಹೆಸರು ಹೇಳಿ ಕೆಲವರು ಯುವಕರನ್ನು ಪ್ರಚೋದಿಸುತ್ತಿದ್ದು, ಇದಕ್ಕೆ ಜಿಲ್ಲಾಡಳಿತ ಬಗ್ಗಬಾರದು ಎಂದು ಆಗ್ರಹಿಸಿದರು.  ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಮಠದ ಮಾತನಾಡಿ ಜಿಲ್ಲಾಧಿಕಾರಿ ಆದೇಶದಿಂದ ಬಹುತೇಕ ಸಾರ್ವಜನಿಕರು ಸಂತೋಷಪಟ್ಟಿದ್ದಾರೆ. ಉತ್ಸವದಲ್ಲಿ ಜಾನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿದೆ. ಲಕ್ಷಾಂತರ ರೂ. ವೆಚ್ಚದ ಡಿ.ಜೆ. ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.  ಕರುನಾಡ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ. ಗೋಪಾಲಗೌಡ್ರು, ಪವನ್ ರೇವಣಕರ್, ಪ್ರಸನ್ನ ಬೆಳಕೆರೆ, ಶಿವಪ್ಪ .ಎಚ್ ಹೊನ್ನಾಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net