

ದಾವಣಗೆರೆ : ಗಣೇಶೋತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ ಸ್ವಾಗತಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರ ಒತ್ತಡಕ್ಕೂ ಮಣಿಯದೇ ಡಿಜೆ ನಿಷೇಧವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಕಿವಿ ಗಡಚಿಕ್ಕುವ ಸದ್ದು ಹೊರಡಿಸುವ ಡಿಜೆಯಿಂದಾಗಿ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತೊಂದರೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರ ಜೀವಕ್ಕೆ ಅಪಾಯವಿದೆ. ಮೆರವಣಿಗೆಗೆ ಬಂದು ಕುಣಿಯುವ ವಿದ್ಯಾರ್ಥಿಗಳು ಕುಡಿದು ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಮೆರವಣಿಗೆಯಲ್ಲಿ ಯುವಜನರು ಡಿಜೆ ಬಳಸದೇ ಡೊಳ್ಳು ಇನ್ನಿತರ ಜಾನಪದ ಕಲಾ ತಂಡಗಳನ್ನು ಬಳಕೆ ಮಾಡಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ‘ತಾಕತ್ತಿದ್ದರೆ ಡಿಜೆ ಹಾಕುವುದನ್ನು ನಿಲ್ಲಿಸಿ’ ಎಂದು ಡಿಸಿ, ಎಸ್ಪಿಗೆ ಧಮ್ಕಿ ಹಾಕಿರುವುದು ಸರಿಯಲ್ಲ. ಇಂಥ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಘನತೆ ತರುವುದಿಲ್ಲ. ಬಿಜೆಪಿಯವರಿಗೆ ಸಮಾಜದ ಸಾಮರಸ್ಯ ಕದಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಚಟವಾಗಿದೆ. ಹಾಗಾಗಿ ರೇಣುಕಾಚಾರ್ಯ ಇಂಥಹ ಹೇಳಿಕೆ ನೀಡಿ ಯುವಕರಿಗೆ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ ಎಂದರು. ರೇಣುಕಾಚಾರ್ಯ ಡಿಜೆ ನಿಷೇಧ ಆದೇಶವನ್ನು ಇನ್ನು ಮುಂದೆಯೂ ವಿರೋಧಿಸಿದರೆ, ಅವರನ್ನು ಗಣಪತಿ ಹಬ್ಬ ಮುಗಿಯುವ ವರೆಗೂ ಪೊಲೀಸ್ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಹಾಲೇಶಪ್ಪ, ಬೀರಪ್ಪ, ಶ್ರೀನಿವಾಸಮೂರ್ತಿ, ಹಬೀಬ್‌ವುಲ್ಲಾ, ಸನಾವುಲ್ಲಾ ಸುದ್ದಿಗೋಷ್ಠಿಯಲ್ಲಿದ್ದರು.